ಟನ್ ಕಬ್ಬಿಗೆ 3500 ರೂ. ನಿಗದಿಪಡಿಸಿ

ಬೆಳಗಾವಿ ಜಿಲ್ಲೆ ಮೂಡಲಗಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು, ರೈತರು ಸಾಗರದ ವರದಹಳ್ಳಿ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದರು. ದಿನೇಶ್ ಶಿರವಾಳ, ರಮೇಶ್ ಕೆಳದಿ, ಶಶಿಕಲಾ, ಸುಜಾತಾ, ಮೇಘರಾಜ್ ಇತರರಿದ್ದರು.
ಬೆಳಗಾವಿ ಜಿಲ್ಲೆ ಮೂಡಲಗಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು, ರೈತರು ಸಾಗರದ ವರದಹಳ್ಳಿ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದರು. ದಿನೇಶ್ ಶಿರವಾಳ, ರಮೇಶ್ ಕೆಳದಿ, ಶಶಿಕಲಾ, ಸುಜಾತಾ, ಮೇಘರಾಜ್ ಇತರರಿದ್ದರು.
Published on
ಸಾಗರ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಬೆಂಬಲಸಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಸಾಗರದ ವರದಹಳ್ಳಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು.
ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಕೇವಲವಾಗಿ ಪರಿಗಣಿಸಿದಂತಿದೆ. ಮುಖ್ಯಮಂತ್ರಿಗಳೂ ಸಹ ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದೆರಡು ದಿನಗಳಿಂದ ರೈತರ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿದ್ದಾರೆ. ರೈತರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ವಿಳಂಬವಾಗಿಯಾದರೂ ಮುಂದೆ ಬಂದಿದೆ. ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದರು.
ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದನ್ನು ಮುಖ್ಯಮಂತ್ರಿಗಳ ಮೇಲೆ ಭರವಸೆ ಇರಿಸಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಕಬ್ಬು ದರ ನಿಗದಿಪಡಿಸುವ ವಿಚಾರದಲ್ಲಿ ಕಾಂಗ್ರೆಸ್‌ನವರು ಕೇಂದ್ರ ಸರ್ಕಾರದ ಮೇಲೆ, ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ದೋಷಾರೋಪ ಮಾಡಿ ರೈತರನ್ನು ದಿಕ್ಕುತಪ್ಪಿಸುವುದನ್ನು ಕೈಬಿಡಬೇಕು. ರೈತರ ಬೇಡಿಕೆಗಳು ತಕ್ಷಣ ಈಡೇರಿಸಬೇಕು. ಇಲ್ಲವಾದಲ್ಲಿ ರಸ್ತೆತಡೆ ನಡೆಯಲಿದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ರಾಜ್ಯ ಸರ್ಕಾರ ಕಬ್ಬು ಬೆಳೆಯುವ ರೈತರ ಹಿತಾಸಕ್ತಿ ಕಾಪಾಡುವತ್ತ ಗಮನ ಹರಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜ್ಯಾದ್ಯಂತ ಹರಡಿದೆ. ರೈತರ ವಿಷಯ ಬಂದಾಗ ಸರ್ಕಾರ ಮೀನಮೇಷ ಎಣಿಸಬಾರದು. ಕಬ್ಬಿಗೆ ತಕ್ಷಣ ದರ ನಿಗದಿಮಾಡುವ ಮೂಲಕ ರೈತರನ್ನು ನಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಜಿನೇಶ್‌ಕುಮಾರ್, ಮೇಘರಾಜ್, ಚಂದ್ರು ಪೂಜಾರಿ, ಶಿವು ಪೂಜಾರಿ, ಗೋಪಾಲ ಲ್ಯಾವಿಗೆರೆ, ಸಂತೋಷ್, ದೇವರಾಜ್ ಬೆಳಂದೂರು, ಶಶಿಕಲಾ ಹುಣಸೂರು, ಸುಜಾತಾ ಶಿರವಾಳ, ತನ್ವೀರ್ ಶೇಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net