ಸಾಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಮಂಡಲಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ ಪ್ರಸಾದ್, ಹಕ್ರೆ ಮಲ್ಲಿಕಾರ್ಜುನ, ದೇವೇಂದ್ರಪ್ಪ, ವಿ.ಮಹೇಶ್ ಇತರರಿದ್ದರು.
Published on:
Copied
Follow Us
ಸಾಗರ: ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ಜನರಿಗೆ ತಿಳಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷದ ಆಡಳಿತದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸಾಗರದ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ನಗರ ಮಂಡಲ ಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಬುದ್ಧರ ಜತೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶವು ಎಲ್ಲ ರಂಗಗಳಲ್ಲಿಯೂ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಅಭಿವೃದ್ಧಿಯ ವೇಗ ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ವಿಸ್ತರಿಸಿದೆ. ಸಿಗಂದೂರು ಸೇತುವೆ ನಿರ್ಮಾಣ ಐತಿಹಾಸಿಕ ಅಭಿವೃದ್ಧಿ ಕೆಲಸವಾಗಿದೆ. ಸಾಗರದ ತ್ಯಾಗರ್ತಿ ವೃತ್ತದಿಂದ ಎಲ್.ಬಿ.ಕಾಲೇಜುವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಸುಮಾರು 75 ಕೋಟಿ ರೂ. ನೀಡಿದೆ. ತಾಳಗುಪ್ಪ, ಆನಂದಪುರ, ಸಾಗರ ರೈಲ್ವೆ ನಿಲ್ದಾಣ ಪ್ರಗತಿಗೆ 100 ಕೋಟಿ ರೂ. ನೀಡಿದೆ ಎಂದರು.
ಜೋಗ ಜಲಪಾತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಯಾರೇ ಫ್ಲೆಕ್ಸ್ ಹಾಕಿಕೊಂಡರೂ ಯೋಜನೆಗೆ ಮಂಜೂರಾತಿ ನೀಡಿದ್ದು ಬಿ.ಎಸ್.ಯಡಿಯೂರಪ್ಪ ಎನ್ನುವುದು ಮರೆಯುವಂತಿಲ್ಲ. ಕ್ಷೇತ್ರಕ್ಕೆ 100 ಬಿಎಸ್‌ಎನ್‌ಎಲ್ ಟವರ್ ಮಂಜೂರಾಗಿದ್ದು ತಲಾ 1 ಕೋಟಿ ರೂ. ವೆಚ್ಚದಲ್ಲಿ 80 ಗ್ರಾಮೀಣ ಪ್ರದೇಶಕ್ಕೆ, 20 ನಗರ ಪ್ರದೇಶಕ್ಕೆ ಟವರ್ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. 2047ರಲ್ಲಿ ವಿಕಸಿತ ಭಾರತದ ಪರಿಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಅನುಷ್ಠಾನಗೊಳಿಸಲು ನಾವೆಲ್ಲ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರು ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಗೆ ವಿಶೇಷ ಒತ್ತು ನೀಡಿದ್ದಾರೆ. ಜೋಗ ಜಲಪಾತ ಅಭಿವೃದ್ಧಿಗೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಂಸದರ ಕಾಳಜಿಯಿಂದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದು ಯೋಜನೆ ಮಂಜೂರು ಮಾಡಿಸಲಾಗಿತ್ತು. ಸಿಗಂದೂರು ಸೇತುವೆ ಸಹ ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಅವರ ಶ್ರಮದಿಂದ ಬಂದಿದೆ ಎಂದು ಹೇಳಿದರು.