ಅಣು ಸ್ಥಾವರ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಸಾಗರ ತಾಲೂಕಿನ ಹುಲಿದೇವರಬನ ಗ್ರಾಪಂ ಎದುರು ಮಕ್ಕಳು ಪ್ರತಿಜ್ಞೆ ಮಾಡಿದರು. ಇಂದೂಧರ ಬೇಸೂರು, ತೀ.ನ.ಶ್ರೀನಿವಾಸ್, ದಿನೇಶ್ ಶಿರವಾಳ, ಕೆ.ವಿ.ನವೀನ್ ಇತರರಿದ್ದರು.
ಸಾಗರ: ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ತಾಲೂಕಿನ ಆವಿನಹಳ್ಳಿ ಹೋಬಳಿ ವ್ಯಾಪ್ತಿಯ ಮಕ್ಕಳು ಹುಲಿದೇವರಬನ ಗ್ರಾಮದ ಬಳಿ ರಸ್ತೆ ತಡೆ ನಡೆಸಿ ಗ್ರಾಪಂ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
‘ನಮ್ಮ ಊರು ನಮ್ಮ ಭವಿಷ್ಯ’ ಘೋಷಣೆಯೊಂದಿಗೆ ನಮ್ಮೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡಿದರು. ಬೇಸೂರು ಗ್ರಾಮದಲ್ಲಿ ಸ್ಥಾವರ ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧವಿದೆ. ಯೋಜನೆಯು ಪರಿಸರಕ್ಕೆ ಮಾರಕ ಆಗುವುದನ್ನು ಸರ್ಕಾರ ಅರಿತುಕೊಳ್ಳಬೇಕು. ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮಕ್ಕಳು ಹಕ್ಕೊತ್ತಾಯ ಮಂಡಿಸಿದರು.
ಸಮಾಜಕ್ಕೆ ಮಾರಕ ಆಗಿರುವ ಯೋಜನೆ ಬೇಡ. ಈಗಾಗಲೆ ಬೇರೆ ಬೇರೆ ಭಾಗದಲ್ಲಿ ಅಣು ಸ್ಥಾವರದಿಂದ ಆಗಿರುವ ಅವಾಂತರ ಗಮನಿಸಿದ್ದೇವೆ. ಲಿಂಗನಮಕ್ಕಿಯಲ್ಲಿ 2500 ಮೆ.ವಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದೀಗ ಬೇಸೂರಿನಲ್ಲಿ 4 ಸಾವಿರ ಮೆ.ವಾ. ವಿದ್ಯುತ್ ಅಣು ಸ್ಥಾವರ ಮೂಲಕ ಉತ್ಪಾದಿಸಲು ಸರ್ಕಾರ ಮುಂದಾಗಿದೆ. ಅಣು ವಿಕಿರಣ ಸೋರಿಕೆಯಿಂದ ದೊಡ್ಡ ಅನಾಹುತವಾಗುವ ಸಾಧ್ಯತೆ ಇದೆ ಎಂದು ಯೋಜನೆ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ದೂರಿದರು.
ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಬೇಡ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯೋಜನೆ ನಿಲ್ಲಿಸಿದ್ದೇವೆ ಎಂದು ಸರ್ಕಾರ ಈತನಕ ಸ್ಪಷ್ಟ ಹೇಳಿಕೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮೇ 20ರಂದು ನಡೆಯುವ ಪಾದಯಾತ್ರೆಗೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕು. ತೀ.ನ.ಶ್ರೀನಿವಾಸ್ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ
ಕೋಳೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ.ನವೀನ್, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಜಯಂತ್, ಅಶೋಕ್ ಬೇಸೂರು, ಮಂಜಪ್ಪ, ನೀಲಕಂಠ ಗೌಡ, ಶಿವಾನಂದ ಗೌಡ, ಸೀತಾರಾಮ ಕುರುವರಿ, ನಾಗೇಂದ್ರ ಸಾಗರ್, ಪ್ರಶಾಂತ ಹೆಗಡೆ ಇತರರಿದ್ದರು.