ತುಮರಿ: ಹೂನಗೋಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿ ಹಾನಿಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಕುದೂರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ.
ಜಿಪಂ ಅನುದಾನದಲ್ಲಿ ನಿರ್ಮಿಸಿದ್ದ ಪಿಡಬ್ಲ್ಯುಡಿ ಮುಖ್ಯ ರಸ್ತೆಯಿಂದ ಹೂನಗೋಡು ಗ್ರಾಮಕ್ಕೆ ಹೋಗುವ ರಸ್ತೆಯ ಮೋರಿ ಒಡೆದು ಹಾಕಲಾಗಿದೆ. ವೈಯಕ್ತಿಕ ಉದ್ದೇಶಕ್ಕಾಗಿ ರಸ್ತೆಯನ್ನು ಹಾಳುಗೆಡವಿ, ಮೂಲ ಮಾರ್ಗವನ್ನೇ ಬದಲಾಯಿಸಿದ್ದಾರೆ. ಮೋರಿಗೆ ಅಳವಡಿಸಲಾಗಿದ್ದ ಪೈಪ್‌ಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.
ಮಳೆ ಬಂದಾಗ ಪೈಪ್‌ಗಳಿಲ್ಲದೆ ನೀರು ಸರಿಯಾಗಿ ಹರಿದುಹೋಗದೆ ರಸ್ತೆಯಲ್ಲೇ ಸಂಗ್ರಹವಾಗುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಕೊಚ್ಚಿಹೋಗುವ ಸಾಧ್ಯತೆಯಿದೆ. ಮಾರ್ಗ ಬದಲಾವಣೆಯಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಶಾಲಾ ಮಕ್ಕಳ ದೈನಂದಿನ ಸಂಚಾರ ಹಾಗೂ ಅಗತ್ಯ ವಸ್ತುಗಳ ಸಾಗಣೆಗೆ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ದಿನ ಗಡುವು: ದೂರನ್ನು ಗಂಭೀರವಾಗಿ ಪರಿಗಣಿಸಿದ ತಾಪಂ ಇಒ ಮೌನೇಶ ಬಡಿಗೇರ ಹಾಗೂ ಕುದುರೂರು ಪಿಡಿಒ ಇಮ್ತಿಯಾಜ್ ಪಾಷಾ ಸ್ಥಳ ಪರಿಶೀಲಿಸಿ ರಸ್ತೆ ಒತ್ತುವರಿ ಮಾಡಿ ಹಾನಿ ಎಸಗಿರುವ ವ್ಯಕ್ತಿಗೆ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ರಸ್ತೆಯನ್ನು ಮೊದಲಿನ ಸ್ಥಿತಿಗೆ ತರಲು ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ. ಕಾಲಮಿತಿಯೊಳಗೆ ರಸ್ತೆ ಸರಿಪಡಿಸದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರಾದ ಕೋದಂಡ, ದೇವೇಂದ್ರ, ಊರಿನ ಗ್ರಾಮಸ್ಥರು ಹಾಜರಿದ್ದರು.