ತೀರ್ಥಹಳ್ಳಿ: ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಡೀ ಭಾರಿ ಮಳೆಯಿಂದ ಹಲವೆಡೆ ಮನೆಗಳು ಕುಸಿದಿವೆ. ತುಂಗಾ, ಮಾಲತಿ ನದಿಗಳೂ ಸೇರಿ ಕುಶಾವತಿ, ಮಲಪಹಾರಿ, ಕುಂಟೇಹೊಳೆ ಮುಂತಾದ ಉಪನದಿಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಪಟ್ಟಣದ ಐತಿಹಾಸಿಕ ರಾಮಮಂಟಪ ಮುಳುಗಿದೆ. ಬಹಳ ವರ್ಷಗಳ ನಂತರ ತುಂಗಾ ನದಿಯಿಂದ ನೆರೆ ಉಂಟಾಗಿದೆ. ತುಂಗಾ ತೂಗು ಸೇತುವೆ ಬಳಿ ಭಾನುವಾರ ಮಧ್ಯಾಹ್ನದ ವೇಳೆಗೆ ನದಿ ನೀರಿನ ಮಟ್ಟ 87 ಅಡಿಗೆ ತಲುಪಿದೆ. ಶ್ರೀ ರಾಮೇಶ್ವರ ದೇವಸ್ಥಾನದ ಬಳಿ ಇರುವ ಅರಳೀಮರದ ಕಟ್ಟೆವರೆಗೂ ನದಿ ನೀರು ತಲುಪಿಸಿದೆ.
ತುಂಗಾ ನದಿ ನೀರು ಅರಳೀಕಟ್ಟೆವರೆಗೆ ತಲುಪಿದ ಸಂತಸದಲ್ಲಿ ಪಪಂ ಸದಸ್ಯೆ ಜ್ಯೋತಿ ಮೋಹನ್ ನೇತೃತ್ವದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಸದಸ್ಯೆಯರು ನದಿಗೆ ಬಾಗಿನ ಅರ್ಪಿಸಿದರು.