ಕುವೆಂಪು ಆಡಳಿತ ಮಂಡಳಿ ಲೋಪ ಖಂಡಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಸಹ್ಯಾದ್ರಿ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಎಚ್.ಎಸ್.ನಿರಂಜನ್, ಗುರುಕಿರಣ್, ವಿನಯ್, ಆದಿತ್ಯ ಶೆಟ್ಟಿ, ನಿಖಿಲ್, ನಂದನ್ ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ: ಕುವೆಂಪು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳ (students) ವಿವಿಧ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) (abvp) ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಸಹ್ಯಾದ್ರಿ ಕಾಲೇಜು ಎದುರು ಪ್ರತಿಭಟನೆ (protest) ನಡೆಸಿದರು.
ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಹಲವು ಬಾರಿ ವಿಶ್ವವಿದ್ಯಾಲಯದ ಗಮನ ಸೆಳೆದಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಎ ಹಾಗೂ ಎಂ.ಎಸ್ಸಿ ಸ್ನಾತಕೋತ್ತರ ಕೋರ್ಸ್‌ಗಳ (courses) ಪ್ರವೇಶಾತಿ ಸ್ಥಗಿತಗೊಳಿಸಿರುವುದರಿಂದ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಸ್ನಾತಕೋತ್ತರದ ಎಲ್ಲ ವಿಭಾಗಗಳ ಪ್ರವೇಶಾತಿಯನ್ನು ತಕ್ಷಣ ಆರಂಭಿಸಬೇಕೆಂದು ಆಗ್ರಹಿಸಿದರು.
ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅಂಕಗಳ ಕಡಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಕಾರಣ ಈ ಪದ್ಧತಿಯನ್ನು ರದ್ದುಪಡಿಸಿ ಸಮರ್ಪಕ ಹಾಗೂ ಪಾರದರ್ಶಕ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸಬೇಕು. ವಿದ್ಯಾರ್ಥಿಗಳಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿ ಕ್ರೀಡಾ ಶುಲ್ಕ ಸಂಗ್ರಹಿಸುತ್ತಿದ್ದರೂ, ಕ್ರೀಡಾ ಸಾಮಗ್ರಿ, ಮೈದಾನ ಸೌಲಭ್ಯ ಹಾಗೂ ತರಬೇತಿ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಕ್ರೀಡಾ ನಿಧಿಯ ಬಳಕೆಯನ್ನು ಪಾರದರ್ಶಕಗೊಳಿಸಿ, ವಿದ್ಯಾರ್ಥಿಗಳ ಕ್ರೀಡಾ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಬೇಕೆಂದು ಒತ್ತಾಯಿಸಿದರು.
ಅನೇಕ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ್ದರೂ ಮೂಲ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರಗಳು ಸಿಗದೆ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ಘಟಿಕೋತ್ಸವದ ದಿನಾಂಕವನ್ನು ಶೀಘ್ರವೇ ಪ್ರಕಟಿಸಬೇಕು. ಕುವೆಂಪು ವಿಶ್ವವಿದ್ಯಾಲಯ ಕ್ಯಾಂಪಸ್ ಹಾಗೂ ಶಿವಮೊಗ್ಗ ನಡುವೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಮಹಾನಗರ ಕಾರ್ಯದರ್ಶಿ ಎಚ್.ಎಸ್.ನಿರಂಜನ್, ವಿಭಾಗ ಸಂಘಟನಾ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ಜಿಲ್ಲಾ ಸಂಚಾಲಕ ನಂದನ್, ನಗರ ಸಂಘಟನಾ ಕಾರ್ಯದರ್ಶಿ ವಿನಯ್, ನಗರ ಕಾರ್ಯಕಾರಿಣಿ ಸದಸ್ಯ ನಿಖಿಲ್, ಎಬಿವಿಪಿ ಕಾಲೇಜು ಘಟಕ ಅಧ್ಯಕ್ಷ ಗುರುಕಿರಣ್ ಇತರರಿದ್ದರು.
ಹೋರಾಟದ ಎಚ್ಚರಿಕೆ
ವಿವಿ ಆಡಳಿತ ಮಂಡಳಿ ಈಗಲೂ ನಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿದ್ಯಾರ್ಥಿ ಸಮುದಾಯದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಮುಂದೆ ನಮ್ಮ ಪ್ರತಿಭಟನೆಯಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಉಂಟಾಗುವ ಅಡಚಣೆಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.