ಸಾಗರ ಮಾರಿಕಾಂಬೆ ಜಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು, ವೀರೇಶ್‌ಕುಮಾರ್, ಚಂದ್ರಶೇಖರ್, ಎಚ್.ಕೆ.ನಾಗಪ್ಪ ಇತರರಿದ್ದರು.
Published on:
Copied
Follow Us
ಸಾಗರ: ಮಾರಿಜಾತ್ರೆ ಯಶಸ್ಸಿಗೆ ಒಂದೊಂದು ಸಮಿತಿಗೂ ತಾಲೂಕು ಮಟ್ಟದ ಒಬ್ಬೊಬ್ಬ ಅಧಿಕಾರಿಯನ್ನು ನೇಮಿಸಲಾಗುವುದು. ಅಧಿಕಾರಿಗಳು ತಮಗೆ ವಹಿಸಿರುವ ಸಮಿತಿಯೊಂದಿಗೆ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 20 ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸಂಚಾಲಕರು, 20 ಸದಸ್ಯರು ಇರುತ್ತಾರೆ ಎಂದರು.
ಜಾತ್ರೆಗೆ ಕನಿಷ್ಠ 8 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಅಮ್ಮನವರ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸುವರು. ಈ ಬಾರಿ ಸರದಿ ಸಾಲಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿಐಪಿ ಪಾಸ್ ಸಂಸ್ಕೃತಿಯನ್ನು ಕೈಬಿಟ್ಟು, ಪ್ರಮುಖರು, ಕೆಲವರಿಗೆ ವಿಶೇಷ ಪಾಸ್ ನೀಡಲಾಗುತ್ತದೆ. ಸರದಿ ಸಾಲಿನಲ್ಲಿ ನಿಂತವರು ದೇವರ ದರ್ಶನ ಪಡೆದ ನಂತರ ವಿಶೇಷ ಪಾಸ್ ಹೊಂದಿರುವವರು ದರ್ಶನ ಪಡೆಯಬಹುದು. ತಾಲೂಕಿನ ಎಲ್ಲ ಕಚೇರಿಗಳಿಗೂ ಬಣ್ಣ ಮಾಡಬೇಕು ಎಂದರು.
ಈ ವರ್ಷ ವಸ್ತು ಪ್ರದರ್ಶನ ಹರಾಜು 1.34 ಕೋಟಿ ರಸ್ವಚ್ಛೂ.ಗೆ ಹೋಗಿದೆ. ಇದರಿಂದ ದೇವಸ್ಥಾನದ ವತಿಯಿಂದ ಶಾಲೆ ಮತ್ತು ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶಕ್ಕೆ ಸ್ಫೂರ್ತಿ ಸಿಕ್ಕಂತಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ನಗರಸಭೆಯಿಂದ ಹೆಚ್ಚಿನ ಜನರನ್ನು ಸ್ವಚ್ಛತಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗುವುದು. ಜಾತ್ರೆ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಅನ್ನು ತಾತ್ಕಾಲಿಕವಾಗಿ ಜಾತ್ರೆ ನಡೆಯುವ ಕಡೆ ಸ್ಥಳಾಂತರಿಸುವ ಜತೆಗೆ ಒಂದು ಹೆಚ್ಚುವರಿ ಆಂಬುಲೆನ್ಸ್ ಸೇವೆಗೆ ಇರಿಸಲಾಗುತ್ತದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ತಹಸೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಪಂ ಇಒ ಶಿವಪ್ರಕಾಶ್, ಬಿಇಒ ಸದಾನಂದ ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಇತರರಿದ್ದರು.
ಎರಡು ದಿನ ರಜೆ ನೀಡಲು ಸೂಚನೆ
ಫೆಬ್ರವರಿಯ ಮೊದಲ ಮಂಗಳವಾರ ಮತ್ತು ಬುಧವಾರ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲು ಶಿಕ್ಷಣಾಧಿಕಾರಿಗಳಿಗೆ ತಿಳಿಸಲಾಗಿದೆ. ಜಾತ್ರೆಯಲ್ಲಿ ಸರಗಳ್ಳತನ ಇನ್ನಿತರೆ ಅಪರಾಧ ಕೃತ್ಯ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಮಾಡಲಾಗುತ್ತದೆ. ಅಮ್ಯೂಸ್‌ಮೆಂಟ್ ಪಾರ್ಕ್ ಹೆಚ್ಚಿನ ದರಕ್ಕೆ ಖರೀದಿ ಮಾಡಿದ್ದೇವೆ ಎಂದು ಆಟಿಕೆಗಳ ದರ ಜಾಸ್ತಿ ಮಾಡುವಂತಿಲ್ಲ. ಜಾತ್ರೆಗೆ ಬರುವ ಬಡ ಮತ್ತು ಮಧ್ಯಮ ಕುಟುಂಬದವರು ಎಲ್ಲ ಸೇವೆ ಪಡೆಯುವಂತೆ ದರ ನಿಗದಿ ಮಾಡಲು ತಿಳಿಸಲಾಗುತ್ತದೆ ಎಂದು ಶಾಸಕ ಬೇಳೂರು ಹೇಳಿದರು.