ಸೊರಬದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಏಡ್ಸ್ ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಆರ್.ಚಂದ್ರಪ್ಪ ಹೊನ್ನೂರು ಉದ್ಘಾಟಿಸಿದರು. ಡಾ. ದಯಾನಂದಕುಮಾರ್, ಡಾ. ನೂತನ್ ನಾಯ್ಕ, ಎಂ.ಸುರೇಶಪ್ಪ ಇತರರಿದ್ದರು.
ಸೊರಬ: ಸಮಾಜದಲ್ಲಿ ಏಡ್ಸ್ ಪೀಡಿತ ವ್ಯಕ್ತಿಗಳನ್ನು ಗೌರವದಿಂದ ಕಾಣಬೇಕು. ಅವರನ್ನು ನಿಂದಿಸುವುದು ಹಾಗೂ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರೆ ಕಾನೂನಿನಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸೊರಬ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಚಂದ್ರಪ್ಪ ಹೊನ್ನೂರು ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ, ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಶಿಕ್ಷಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಜಾಥಾ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಡ್ಸ್ ಕಾಯಿಲೆ ಬಗ್ಗೆ ಮೊದಲು ಅರಿವು ಇರಲಿಲ್ಲ. ಆದರೆ ಈಗ ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಸೋಂಕಿನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ಸರ್ಕಾರವು ಎಚ್‌ಐವಿ ಸೋಂಕಿತರಿಗೆ ಅನೇಕ ಸೌಲಭ್ಯ ಒದಗಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ದಯಾನಂದಕುಮಾರ್, ಟಿಎಚ್‌ಒ ಡಾ. ನೂತನ್ ನಾಯ್ಕ, ಪ್ರಾಚಾರ್ಯ ಎಂ.ಸುರೇಶಪ್ಪ, ಬಿಆರ್‌ಸಿ ರಾಘವೇಂದ್ರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ಕೆ.ನಾಗರಾಜ್, ಸೋಮೇಶ್, ಪದ್ಮಾವತಿ, ಉಪನ್ಯಾಸಕ ಡಾ. ಉಮೇಶ್, ಶಬ್ಬೀರ್ ಅಹ್ಮದ್ ಇತರರಿದ್ದರು.