ವಸತಿ ಶಾಲೆ ಪ್ರಾಚಾರ್ಯೆ ವರ್ಗಾವಣೆ | meeting with villagers

ಆನವೇರಿ ಮುರಾರ್ಜಿ ವಸತಿ ಶಾಲೆ ಅವ್ಯವಸ್ಥೆಗೆ ಸಂಬಂಧಿಸಿ ಇಲಾಖೆ ಜಿಲ್ಲಾಧಿಕಾರಿ ಶೋಭಾ ಅವರು ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಅಹವಾಲು ಆಲಿಸಿದರು. ನಾಗರಾಜ್, ತಿಪ್ಪೇಶ್, ದಾನಶೇಖರಪ್ಪ, ಮಲ್ಲೇಶಪ್ಪ ಇತರರಿದ್ದರು.
ಆನವೇರಿ ಮುರಾರ್ಜಿ ವಸತಿ ಶಾಲೆ ಅವ್ಯವಸ್ಥೆಗೆ ಸಂಬಂಧಿಸಿ ಇಲಾಖೆ ಜಿಲ್ಲಾಧಿಕಾರಿ ಶೋಭಾ ಅವರು ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಅಹವಾಲು ಆಲಿಸಿದರು. ನಾಗರಾಜ್, ತಿಪ್ಪೇಶ್, ದಾನಶೇಖರಪ್ಪ, ಮಲ್ಲೇಶಪ್ಪ ಇತರರಿದ್ದರು.
Published on
ಹೊಳೆಹೊನ್ನೂರು: ಸಮೀಪದ ಆನವೇರಿಯ ಮುರಾರ್ಜಿ ಶಾಲೆಯಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ವಸತಿ ಶಾಲೆ ವಿದ್ಯಾರ್ಥಿಗಳು ಆನವೇರಿ ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಮೀಪದ ಹಿರಿಮಾವುರದಮ್ಮ ಗುಡ್ಡದಿಂದ ಕಾಲ್ನಡಿಗೆಯಲ್ಲಿ ಬಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರಾಚಾರ್ಯೆಯನ್ನು ಅಮಾನತು ಮಾಡಬೇಕು. ಕಳಪೆ ಆಹಾರ ಸೇವಿಸಿ ಮೃತಪಟ್ಟ ನಮ್ಮ ಸ್ನೇಹಿತೆಯ ಸಾವಿಗೆ ನ್ಯಾಯ ದೊರೆಯುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರು ವಿಫಲರಾದರು. ಮಧ್ಯಾಹ್ನದ ವೇಳೆಗೆ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ ಸ್ಥಳಕ್ಕೆ ಬಂದು ಪ್ರಾಚಾರ್ಯರನ್ನು ವರ್ಗಾವಣೆ ಮಾಡಿರುವ ಪ್ರತಿಯನ್ನು ಮೊಬೈಲ್‌ನಲ್ಲಿ ತೊರಿಸಿದ ನಂತರ ವಿದ್ಯಾರ್ಥಿಗಳು ಸಮಾಧಾನಗೊಂಡರು.
ಗ್ರಾಪಂನಲ್ಲಿ ಶೋಭಾ ಅವರು ಸಭೆ ನಡೆಸಿದರು. ಶಾಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಶಾಲೆ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಹಲವು ಬಾರಿ ತಿಳಿ ಹೇಳಿದರು ತಿದ್ದಿಕೊಳ್ಳದ ಪ್ರಾಚಾರ್ಯೆ ಅವರಿಂದ ಶಾಲೆಯ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಪಾಲಕರು ದೂರಿದರು.
ಪ್ರಾಚಾರ್ಯೆ ಬೇರೆಡೆ ಹೋದರೆ ಅಲ್ಲಿಯೂ ಇದೇ ರೀತಿ ವರ್ತನೆ ತೋರುತ್ತಾರೆ. ಹಾಗಾಗಿ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಡಿ ದರ್ಜೆ ನೌಕರನೊಬ್ಬ ವಸತಿ ಶಾಲೆ ಮೇಲೆ ಹಿಡಿತ ಸಾಧಿಸಿ ವಿದ್ಯಾರ್ಥಿಗಳು ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾನೆ. ಆತನನ್ನು ಸ್ಥಳಕ್ಕೆ ಕರೆಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಿ ಮಾತನಾಡಿದ ಶೋಭಾ, ಖಾಸಗಿ ಏಜೆನ್ಸಿಗೆ ನೋಟಿಸ್ ನೀಡಿ ಕೂಡಲೇ ಡಿ ದರ್ಜೆ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗುವುದು. ಕರ್ತವ್ಯದಲ್ಲಿ ನಿರ್ಲಕ್ಷೃ ತೋರಿದ ಪ್ರಾಚಾರ್ಯೆ ಆರ್.ಎಫ್.ಹೂಗಾರ್ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಪ್ರಭಾರ ವಾರ್ಡನ್ ಹುದ್ದೆಯನ್ನು ತೆರವುಗೊಳಿಸಲಾಗಿದೆ. ಹಂಚಿನಸಿದ್ದಾಪುರದ ವಸತಿ ಶಾಲೆ ಪ್ರಾಚಾರ್ಯ ಎಂ.ಜಿ.ಗಣೇಶ್ ಅವರನ್ನು ತಾತ್ಕಾಲಿಕವಾಗಿ ಆನವೇರಿ ವಸತಿ ಶಾಲೆ ಪ್ರಾಚಾರ್ಯರನ್ನಾಗಿ ನಿಯೋಜಿಸಲಾಗಿದೆ. ವಸತಿ ಶಾಲೆ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. ಅವ್ಯವಸ್ಥೆಗಳನ್ನು ಸದ್ಯದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಪಿಡಿಒ ನಾಗರಾಜ್, ಗ್ರಾಮಸ್ಥ ತಿಪ್ಪೇಶ್, ದಾನಶೇಖರಪ್ಪ, ಮಲ್ಲೇಶಪ್ಪ, ಧರ್ಮಪ್ರಸಾದ್, ಗಿರೀಶ್ ರಾವ್, ರಂಗಪ್ಪ, ಮಂಜುನಾಥ್, ನಾಗರಾಜ್, ಶಾಮಸುಂದರ್, ರಫೀಕ್, ಸಾಯಿಪ್ರಸಾದ್, ಮೋಹನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net