ಕೆಪಿಎಸ್‌ಗಳಿಗೂ ಸಂಗೀತ, ದೈಹಿಕ ಶಿಕ್ಷಕರ ನೇಮಕಾತಿ । KPS

ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ವರ್ಷದಿಂದ 900 ಕೆಪಿಎಸ್ ಆರಂಭಿಸಲು ಸಿದ್ಧತೆ
  • ಸಂಗೀತದಿಂದ ಪ್ರತಿ ಮಗುವಿನ ಕಲಿಕೆಗೆ ಪೂರಕ ವಾತಾವರಣ
  • ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿವಮೊಗ್ಗ: ಮುಂದಿನ ವರ್ಷದಿಂದ 900 ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್)ಗಳು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಎಲ್ಲ ಕೆಪಿಎಸ್‌(Kps)ಗಳಿಗೂ ಸಂಗೀತ ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ(Education minister) ಮಧು ಬಂಗಾರಪ್ಪ ಹೇಳಿದರು.
ಸರ್ಕಾರಿ ಶಾಲೆ(Govt school)ಗಳಿಗೆ 11 ಸಾವಿರ ಮತ್ತು ಅನುದಾನಿತ ಶಾಲೆಗಳಿಗೆ 6 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ನಡೆದಿವೆ. ಅದರ ಜತೆಗೆ ದೈಹಿಕ ಶಿಕ್ಷಣ ಮತ್ತು ಸಂಗೀತ ಶಿಕ್ಷಕರ ನೇಮಕಕ್ಕೂ ಕ್ರಮ ವಹಿಸಲಾಗುವುದು. ಇದು ಪ್ರತಿ ಮಗುವಿನ ಕಲಿಕೆಯಲ್ಲಿ ಪೂರಕ ವಾತಾವರಣ ನಿರ್ಮಾಣಗೊಳ್ಳಲಿದೆ ಎಂಬ ಆಶಯ ತಮಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಮಕ್ಕಳು ಸಂಗೀತ(Music)ದಿಂದ ವಂಚಿತವಾಗಬಾರದು. ಆಟ ಪಾಠಗಳ ಜತೆಗೆ ಮಕ್ಕಳಿಗೆ ಸಂಗೀತವೂ ಮುಖ್ಯವಾಗಿದೆ. ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಸಂಗೀತ ಕಲಿಕೆಗೂ ಆದ್ಯತೆ ಮತ್ತು ಅವಕಾಶ ಕಲ್ಪಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಕೆಪಿಎಸ್‌ಗಳಿಗೆ ಕಡ್ಡಾಯವಾಗಿ ಸಂಗೀತ ಮತ್ತು ದೈಹಿಕ ಶಿಕ್ಷಕರ ನೇಮಕಾತಿಗೆ ತೀರ್ಮಾನ ಮಾಡಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಸುಧಾರಣಾ ಕ್ರಮಗಳು, ಗುಣಾತ್ಮಕ ಶಿಕ್ಷಣ ಅನುಷ್ಠಾನ ಕ್ರಮಗಳ ಕುರಿತು ಈಗಾಗಲೇ ನಿರ್ಣಯ ಕೈಗೊಂಡಿರುವಂತೆ ಮುಂದಿನ ವರ್ಷಾರಂಭದಲ್ಲಿ 500 ಕೆಪಿಎಸ್ ಜತೆಗೆ ಹೆಚ್ಚುವರಿಯಾಗಿ 300 ಕೆಪಿಎಸ್‌ಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಅನುದಾನದಿಂದ 100 ಕೆಪಿಎಸ್‌ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಡಿಪಿಆರ್(ವಿಸ್ತೃತ ಯೋಜನಾ ವರದಿ) ಸಿದ್ಧಗೊಳ್ಳುತ್ತಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net