ಆರ್‌ಸಿಬಿ ಅಭಿಮಾನಿಗಳ ಅತಿರೇಕಕ್ಕೆ ಲಾಠಿಚಾರ್ಜ್ | RCB Vijayostava

ಶಿವಮೊಗ್ಗದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಆರ್‌ಸಿಬಿ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರು.
ಶಿವಮೊಗ್ಗದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಆರ್‌ಸಿಬಿ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಮಧ್ಯರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ
  • ವಾಹನ ತಡೆಯದಂತೆ ಪೊಲೀಸರ ಸೂಚನೆ ಕಡೆಗಣನೆ
  • ವರ್ತನೆ ಅತಿರೇಕವಾಗುತ್ತಿದ್ದಂತೆ ಲಘು ಲಾಠಿ ಪ್ರಹಾರ
ಶಿವಮೊಗ್ಗ: ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲಿ ಭಾನುವಾರ ರಾತ್ರಿ ಗುಜರಾತ್ ಜೈಂಟ್ಸ್(ಜಿಟಿ) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore)(ಆರ್‌ಸಿಬಿ) ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ನಗರದಲ್ಲಿ ಆರ್‌ಸಿಬಿ ಅಭಿಮಾನಿಗಳು(RCB fans) ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಅಭಿಮಾನಿಗಳ ವರ್ತನೆ ಅತಿರೇಕವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಮೂಲಕ ಬಿಸಿ ಮುಟ್ಟಿಸಿದರು.
ವಿಜಯೋತ್ಸವ(Vijayostava)ವನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ ಭಾನುವಾರ ರಾತ್ರಿ ಆರ್‌ಸಿಬಿ ಗೆಲುವು ನಿಶ್ಚಿತ ಆಗುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಟಿ.ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹಮ್ಮದ್ ವೃತ್ತ ಸೇರಿ ಹಲವಡೆ ಜಮಾವಣೆಗೊಂಡರು. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು. ತಡರಾತ್ರಿ 12.30 ಆದರೂ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. 
ನಗರದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಬೈಕ್‌ಗಳ ಆಕ್ಸಿಲೇಟರ್‌ಗಳನ್ನು ರೇಸ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಅಭಿಮಾನಿಗಳಿಗೆ ಮನೆಗೆ ಮರಳುವಂತೆ ಪೊಲೀಸರು ಮನವೊಲಿಸಿದರೂ ಮಾತು ಕೇಳಲಿಲ್ಲ. ಹಾಗಾಗಿ ಜನದಟ್ಟಣೆ(Crowding) ನಿಯಂತ್ರಿಸಲು ಪೊಲೀಸರು ಟಿ.ಸೀನಪ್ಪ ಶೆಟ್ಟಿ, ಅಮೀರ್ ಅಹಮ್ಮದ್ ವೃತ್ತದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಲಾಠಿ ರುಚಿ ತೋರಿದರು. ಲಾಠಿ ಏಟು ಬೀಳುತ್ತಿದ್ದಂತೆ ದಿಕ್ಕಪಾಲಾಗಿ ಓಡಿದ ದೃಶ್ಯಗಳು ಮೊಬೈಲ್‌ಗಳಲ್ಲಿ ಸೆರೆಯಾಗಿದೆ.  
ಬಿಗಿ ಪೊಲೀಸ್ ಬಂದೋಬಸ್ತ್: ಐಪಿಎಲ್ ಫೈನಲ್(IPL final) ಪಂದ್ಯಾವಳಿ ಹಿನ್ನೆಲೆಯಲ್ಲಿ ನಗರಾದ್ಯಂತ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಯುವಕರು ಬೈಕ್ ಜಾಥಾ ನಡೆಸಿದರು. ಕೆಲವರು ಪಟಾಕಿ ಸಿಡಿಸಿದರು. ಇದೇ ವೇಳೆ ಕೆಲವು ಯುವಕರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ತಡೆದು ಸಂಭ್ರಮಾಚರಣೆಗೆ ಮುಂದಾದರು. ಬಿ.ಎಚ್.ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್‌ಗಳು, ವಾಹನಗಳನ್ನು ತಡೆಯದಂತೆ ಪೊಲೀಸರು ಎಚ್ಚರಿಸಿದರು. ಆದರೆ ಕೆಲವು ಯುವಕರು ಅದನ್ನು ಮೀರಿ ರಸ್ತೆ ತಡೆದು ಕುಣಿಯಲು ಆರಂಭಿಸಿದರು. 
ಈ ವೇಳೆ ಪೊಲೀಸರು ಯುವಕರನ್ನು ರಸ್ತೆಯಿಂದ ಬದಿಗೆ ಸರಿಸಲು ಯತ್ನಿಸಿದರು. ಆಗ ನೂಕಾಟ, ತಳ್ಳಾಟವಾಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. 2025ರ ಐಪಿಎಲ್ ಪಂದ್ಯಾವಳಿಯ ಸಂಭ್ರಮಾಚರಣೆ ವೇಳೆಯೂ ಶಿವಮೊಗ್ಗದಲ್ಲಿ ಲಾಠಿ ಚಾರ್ಜ್ ಆಗಿತ್ತು. ಅಂದಿನ ಗೋಪಿ ಸರ್ಕಲ್‌ನಲ್ಲಿ ಯುವಕರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಲಾಗಿತ್ತು. 

ಹಲವೆಡೆ ಉಚಿತ ನೇರ ಪ್ರಸಾರ

ಶಿವಮೊಗ್ಗದ ಹಲವೆಡೆ ಆರ್‌ಸಿಬಿ-ಜಿಟಿ ನಡುವಿನ ಫೈನಲ್ ಪಂದ್ಯದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಲ್ಲಿಕಾರ್ಜುನ ಚಿತ್ರಮಂದಿರ, ದುರ್ಗಿಗುಡಿ, ಕುವೆಂಪುನಗರ ಸೇರಿ ನಗರದ ಹಲವೆಡೆ ದೊಡ್ಡ ಪರದೆಗಳ ಮೇಲೆ ಐಪಿಎಲ್ ಫೈನಲ್ ಪಂದ್ಯದ ನೇರ ಪ್ರಸಾರ ಮಾಡಲಾಯಿತು. ಯುವಕ-ಯುವತಿಯರು ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net