ಸಾಗರ: ರಾಮಾಯಣ, ಮಹಾಭಾರತದ ಕಥಾನಕಗಳು ನಮ್ಮ ಜೀವನಕ್ಕೆ ಮೌಲ್ಯ ಕಟ್ಟಿಕೊಡುವ ಗ್ರಂಥಗಳು ಎಂದು ಎಲ್ಬಿ ಕಾಲೇಜಿನ ಪ್ರಾಚಾರ್ಯ ಡಾ. ಎ.ಎಸ್.ಲಕ್ಷ್ಮೀಶ್ ಹೇಳಿದರು.
ಸಾಗರ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯತರಂಗ ಸಂಸ್ಥೆ ಏರ್ಪಡಿಸಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದಲ್ಲಿ ಮಾತನಾಡಿದ ಅವರು, ಇಂದು ಕಾನೂನು ಮತ್ತು ಶಾಸನ ನಮ್ಮ ಜೀವನ ಸುಗಮಗೊಳಿಸುವ ಸಾಧನಗಳಾದರೆ, ಹಿಂದಿನ ಕಾಲದಿಂದಲೂ ರಾಮಾಯಣ, ಮಹಾಭಾರತದ ಮೌಲ್ಯಗಳು ಜೀವನಕ್ಕೆ ದಾರಿದೀಪವಾಗಿವೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಎಚ್.ಎಸ್.ಮೋಹನ್ ಮಾತನಾಡಿ, ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಕ್ಷೇತ್ರ ನಿರ್ಲಕ್ಷೃ ಮಾಡಿರುವುದು ಬೇಸರದ ಸಂಗತಿ. ಇನ್ನಾದರೂ ಯಕ್ಷಗಾನ ಸಾಹಿತ್ಯವನ್ನು ಆಧರಿಸುವ ಕಾರ್ಯವಾಗಬೇಕಿದೆ ಎಂದರು.
ನಂತರ ವಿಜಯ ಸೇವಾ ಟ್ರಸ್ಟ್, ಸಾಗರದ ಯಕ್ಷಶ್ರೀ ಸಂಯೋಜನೆಯಲ್ಲಿ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾಪೋಷಕ ಎನ್.ನಾಗರಾಜ್, ನಾಟ್ಯತರಂಗದ ಮುಖ್ಯಸ್ಥ ವಿದ್ವಾನ್ ಜನಾರ್ದನ, ಪೂಜಾ, ರಾಜಲಕ್ಷ್ಮೀ, ಶಮಾ ಇದ್ದರು.