ಭದ್ರಾವತಿ: ದುಶ್ಚಟ ತ್ಯಜಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ನ್ಯಾಯಾಧೀಶೆ ಚೇತನಾ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜನರು ದುಶ್ಚಟಗಳಿಂದ ದೂರ ಇರುವಂತೆ ಅರಿವು ಮೂಡಿಸಬೇಕು. ಆರೋಗ್ಯ ಕಾಪಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಪ್ರದೀಪ್ ದೇವಗಿರಿ ಮಾತನಾಡಿ, ಆಕರ್ಷಣೆಗೆ ಒಳಗಾಗಿ ಪ್ರಾರಂಭಿಸುವ ತಂಬಾಕು ಉತ್ಪನ್ನಗಳ ದುಶ್ಚಟ ಕ್ರಮೇಣ ವ್ಯಕ್ತಿಯ ಜೀವನವನ್ನೇ ಸರ್ವನಾಶ ಮಾಡುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ.ಅಶೋಕ್ ಮಾತನಾಡಿ, ವಿಶ್ವಾದ್ಯಂತ ಪ್ರತಿ ವರ್ಷ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ ಎಂದು ತಿಳಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ರವಿರಾಜ್, ನಗರಸಭೆ ಪೌರಾಯುಕ್ತ ಕೆ.ಎನ್.ಹೇಮಂತ್, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ವಸಂತ, ಆನಂದಮೂರ್ತಿ ಇತರರಿದ್ದರು.