ಸೊರಬ: ಸಮಾಜದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳ ನಿಯಂತ್ರಿಸಲು ಅರಿವು ಮೂಡಿಸುವ ಜತೆಗೆ ಅಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ. ವೀಣಾ ಭಟ್ ಹೇಳಿದರು.
ತಹಸೀಲ್ದಾರ್ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಪಂ, ಪುರಸಭೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಿಷನ್ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಿಷನ್ ಸುರಕ್ಷಾ ಅಭಿಯಾನ ಮೂಲಕ ಪೋಕ್ಸೋ ಪ್ರಕರಣದ ಬಗ್ಗೆ ಪಾಲಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸಿದಾಗ ಜಾಗೃತಿ ಹೊಂದಲು ಸಾಧ್ಯ. ಮಗುವಿನ ಬಾಲ್ಯ, ಆರೋಗ್ಯ, ಶಿಕ್ಷಣ ಸರಿಯಾದರೆ ಅವರ ಜೀವನ ಸರಿಯಾಗುತ್ತದೆ. ಮಗುವಿನ ಸಮಗ್ರ ಬೆಳವಣಿಗೆಗೆ ಶಿಕ್ಷಕರು, ವೈದ್ಯರು ಹಾಗೂ ಪಾಲಕರ ಪಾತ್ರ ಮುಖ್ಯ ಎಂದು ತಿಳಿಸಿದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್ ಮಾತನಾಡಿ, ಮಿಷನ್ ಸುರಕ್ಷಾ ಯೋಜನೆ ಜಾರಿಗೆ ಬಂದು ಎಂಟು ತಿಂಗಳು ಕಳೆದಿವೆ. ಕ್ರಿಯಾ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ತಾಪಂ ಇಒ ಕೆ.ಜಿ.ಶಶಿಧರ, ತಾಲೂಕು ಆರೋಗ್ಯಾಧಿಕಾರಿ ಡಾ. ನೂತನ್ ನಾಯ್ಕ, ಬಿಇಒ ಆರ್.ಪುಷ್ಪಾ, ಸಿಪಿಐ ಮಹಾಂತೇಶ್ ಲಂಬಿ, ಸಿಡಿಪಿಒ ಸೋಮಶೇಖರ್, ಕೆ.ಜಿ.ಕುಮಾರ್, ಮುರುಗೇಶ್, ಇಕ್ಬಾಲ್ ಜಾತಿಗೇರ, ಮೀನಾಕ್ಷಿ, ಶ್ರೀರಾಮ್, ಡಾ. ಶ್ರೀಕಾಂತ್, ಡಾ. ವಿನಯ್ ಪಾಟೀಲ್ ಇತರರಿದ್ದರು.