ಸೊರಬ ಗಾಂಧಿ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವದಲ್ಲಿ ಸಿವಿಲ್ ನ್ಯಾಯಾಧೀಶ ಆರ್.ಚಂದ್ರಪ್ಪ ಹೊನ್ನೂರು ಸಸಿ ನೆಟ್ಟರು. ರಾಜು ಕೆ. ಶೇಡಬಾಳ್ಕರ್, ಕೆ.ಪುರಂದರ, ನವೀನ್‌ಕುಮಾರ್ ಇತರರಿದ್ದರು.
ಸೊರಬ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶಗೊಳಿಸುತ್ತಿರುವ ಪರಿಣಾಮ ಮಳೆ ಅಭಾವ ಹೆಚ್ಚಾಗುತ್ತಿದೆ. ಜನರಲ್ಲಿ ಪರಿಸರ ಜಾಗೃತಿ, ಅರಣ್ಯ ಸಂರಕ್ಷಣೆ ಅರಿವು ಮೂಡಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಸಿವಿಲ್ ನ್ಯಾಯಾಧೀಶ ಆರ್.ಚಂದ್ರಪ್ಪ ಹೊನ್ನೂರು ಹೇಳಿದರು.
ಹೈಕೋರ್ಟ್ ನಿರ್ದೇಶನದಂತೆ ಅರಣ್ಯೀಕರಣ ಮತ್ತು ಕೆರೆಗಳ ಪುನರುಜ್ಜೀವನ ಅಭಿಯಾನ ಅಂಗವಾಗಿ ಪುರಸಭೆ ಅರಣ್ಯ ಇಲಾಖೆ, ವಕೀಲರ ಸಂಘ, ಕಾನೂನು ಸೇವಾ ಸಮಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ ಗಾಂಧಿ ಪಾರ್ಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲದ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಸಾಧ್ಯತೆ ಇದೆ ಎಂದರು.
ಜನರು ಈವರೆಗೂ ನಾಶಪಡಿಸಿದಷ್ಟು ಸಸಿಗಳ ಸಂಖ್ಯೆಯಷ್ಟೇ ಗಿಡಗಳನ್ನು ಬೆಳೆಸಿದ್ದರೆ ಪರಿಸರ ಸಮತೋಲನದಿಂದ ಇರುತ್ತಿತ್ತು. ಸಾಮಾನ್ಯ ಜನರು ಸಮೃದ್ಧ ಜೀವನ ನಡೆಸುತ್ತಿದ್ದರು ಎಂದು ತಿಳಿಸಿದರು.
ಕಿರಿಯ ನ್ಯಾಯಾಧೀಶ ರಾಜು ಕೆ.ಶೇಡಬಾಳ್ಕರ್, ತಹಸೀಲ್ದಾರ್ ಕೆ.ಪುರಂದರ, ಪಿಎಸ್‌ಐ ನವೀನ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ಕಾರ್ಯಪಾಲಕ ಅಭಿಯಂತ ಕಿರಣ್‌ಕುಮಾರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ವಿನಯ್ ಪಾಟೀಲ್ ಇತರರಿದ್ದರು.