ಶಿವಮೊಗ್ಗ: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದ್ದು, ಸುಮಾರು 150 ವರ್ಷಗಳ ಇತಿಹಾಸದಲ್ಲೇ ಜೂನ್ ತಿಂಗಳಲ್ಲಿ ಇಷ್ಟು ಕಡಿಮೆ ಮಳೆಯಾಗಿದೆ. ಇದರಿಂದಲೇ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ(Minister Ramalinga Reddy) ಮನವಿ ಮಾಡಿದರು.
ಭದ್ರಾ ಜಲಾಶಯ(Bhadra dam)ಕ್ಕೆ ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗೆ ಇನ್ನೂ ಮೂರರಿಂದ ನಾಲ್ಕು ತಿಂಗಳವರೆಗೆ ಯಾವುದೇ ತೊಂದರೆ ಇಲ್ಲ ಎಂದರು.
ಇತ್ತೀಚೆಗೆ ಬಾಗಲಕೋಟೆ, ಬೆಳಗಾವಿ ಹಾಗೂ ಸಕಲೇಶಪುರ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು(Inflow) ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ: ಅಣೆಕಟ್ಟೆಯಲ್ಲಿ ನೀರಿದ್ದರೆ ಮಾತ್ರ ಬೆಳೆಗಳಿಗೆ ನೀರು ಬಿಡಲು ಸಾಧ್ಯ. ಅದಕ್ಕಾಗಿಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(Chief Minister DK Shivakumar) ರೈತರು ಬಿತ್ತನೆ ಮಾಡಬಾರದೆಂದು ಸೂಚನೆ ನೀಡಿದ್ದಾರೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ಉತ್ತಮ ಮಳೆಯಾದರೆ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಜಲಾಶಯಗಳಲ್ಲೂ ಕುಡಿಯುವ ನೀರಿಗೆ ಸಾಕಾಗುವಷ್ಟು ನೀರು ಕಾಯ್ದಿರಿಸಲಾಗಿದೆ. ಮಳೆ ಬರದಿದ್ದರೂ ಕನಿಷ್ಠ ಮೂರ್ನಾಲ್ಕು ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.
ಭದ್ರಾ ಕಾಡಾ ವ್ಯಾಪ್ತಿಯ ಆಡಳಿತ ಬದಲಾವಣೆ
ಭದ್ರಾ ಕಾಡಾ ವ್ಯಾಪ್ತಿಯ ಕೆಲವು ಯೋಜನೆಗಳನ್ನು ಕರ್ನಾಟಕ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸುವ ಬಗ್ಗೆ ರೈತರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳಿಗಾಗಿ ಮಾತ್ರ ಪ್ರತ್ಯೇಕವಾಗಿ ವಿಶ್ವೇಶ್ವರಯ್ಯ ಜಲ ನಿಗಮ ರಚಿಸಲಾಗಿದೆ. ಯೋಜನೆಗಳು ಪೂರ್ಣಗೊಂಡ ನಂತರ ನಿರ್ವಹಣೆ ಮಾತ್ರ ಉಳಿಯುತ್ತದೆ. ಅದನ್ನು ಯಾರು ವಿರೋಧ ಮಾಡಿದರೂ ಜನರಿಗೆ ಹಾಗೂ ರೈತರಿಗೆ ನೀರು ಸಿಗುವುದೇ ಮುಖ್ಯ. ವಿಶ್ವೇಶ್ವರಯ್ಯ ಜಲ ನಿಗಮ ಮಾಡಿದರೂ ಅಥವಾ ಕೆಎನ್‌ಎನ್‌ಎಲ್ ಮಾಡಿದರೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.