ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿ ಕಾರೆಮಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ. ಹಾಲೇಶ್, ಹರೀಶ್, ಬಾಲಚಂದ್ರ ನಾಯ್ಡು ಇತರರಿದ್ದರು.
ರಿಪ್ಪನ್‌ಪೇಟೆ: ಚಿಕ್ಕಜೇನಿ ಗ್ರಾಪಂ ವ್ಯಾಪ್ತಿ ಕಾರೇಮಟ್ಟಿ ಗ್ರಾಮದ ಅರವಿಂದ ಭಟ್ಟರ ಕೃಷಿ ಕ್ಷೇತ್ರ ಹಾಗೂ ಸಮೀಪದ ಅರಣ್ಯ ಪ್ರದೇಶದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಹೊಸನಗರ ಅರಣ್ಯ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಓಪನ್‌ಮೈಂಡ್ ಶಾಲೆ ಮಕ್ಕಳು ಪಾಲ್ಗೊಂಡಿದ್ದರು.
ಪರಿಸರ ಸಂರಕ್ಷಣೆ, ಮಳೆ, ನೀರಿನ ಅವಶ್ಯಕತೆ, ಸಸಿ ನೆಟ್ಟು ಪೋಷಿಸುವ ಬಗೆ, ಅರಣ್ಯದ ಮಹತ್ವ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು. ಶಾಲಾ ಮಕ್ಕಳ ಪ್ರಶ್ನೆಗಳಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದರು.
ಡಿಆರ್‌ಎಫ್‌ಒ ಹಾಲೇಶ್ ಮಾತನಾಡಿ, ಜೂನ್ ಮಲೆನಾಡಿನಲ್ಲಿ ಮಳೆ ಆರಂಭದ ಕಾಲವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದಕ್ಕೆ ಅರಣ್ಯ ನಾಶವು ಒಂದು ಕಾರಣವಾಗಿದೆ. ಅರಣ್ಯ ಸಂಪತ್ತು ಸಮೃದ್ಧವಾಗಿದ್ದರೆ ಜೀವಿಗಳಿಗೆ ಅಗತ್ಯವಿರುವ ಆಮ್ಲಜನಕ ಮತ್ತು ನೀರು ಹೇರಳವಾಗಿ ದೊರೆಯುತ್ತದೆ. ಕಾಡಿನ ವಿವಿಧ ಜಾತಿಯ ಗಿಡ ಬೆಳೆಸುವುದು ಸುಲಭವಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆ ಸುತ್ತಮುತ್ತಲಿನ ಜಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಕಾಡು ಜಾತಿ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟರು. ಅರಣ್ಯ ಬೆಳೆಸುವ ಉದ್ದೇಶ ಹಾಗೂ ಮಹತ್ವವನ್ನು ಅರಣ್ಯಧಿಕಾರಿಗಳು ವಿವರಿಸಿದರು. ಅರಣ್ಯ ಇಲಾಖೆಯ ಹರೀಶ್, ಮಲ್ಲಪ್ಪ, ಚೂಡಾಮಣಿ, ಶಾಲೆಯ ಬಾಲಚಂದ್ರ ನಾಯ್ಡು, ರೈತ ಅರವಿಂದ ಭಟ್, ತೀರ್ಥೇಶ್ ಇತರರಿದ್ದರು.