ಹಿರೇಕೆರೂರು ತಾಲೂಕು ಪುರದಕೆರೆ ಹತ್ತಿರ ನಿರ್ಮಿಸಿರುವ ಜಾಕ್ವೆಲ್.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೈತರ ಮೊಗದಲ್ಲಿ ಮಂದಹಾಸ ತಂದ ಮಳೆ
ಶಿಕಾರಿಪುರ ತಾಲೂಕಿಗೆ ಆಸರೆಯಾದ ಏತ ನೀರಾವರಿ ಯೋಜನೆ
ಮೂರು ಹೋಬಳಿಯ ಕೆರೆಗಳಿಗೆ ನೀರು ಬಿಡುಗಡೆ
ಕೃಷಿ ಚಟುವಟಿಕೆ ಚುರುಕು
ಶಿಕಾರಿಪುರ: ಮುಂಗಾರು ಮಳೆ ಕೊರತೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಮಂದಹಾಸಕ್ಕೆ ಕಾರಣವಾಗಿದೆ. ಭಾನುವಾರ ಸಂಜೆಯಿಂದ ಉಡುಗಣಿ, ತಾಳಗುಂದ ಹೊಸೂರು ಹೋಬಳಿಯ ಮತ್ತು ಹಿರೇಕೆರೂರು ತಾಲೂಕಿನ ಹಲವು ಕೆರೆಗಳಿಗೆ ತುಂಗಭದ್ರಾ ಏತ ನೀರಾವರಿ ಮೂಲಕ ನೀರು ಹರಿಸಲಾಗಿದೆ.
ಎರಡು ಮೂರು ದಿನಗಳಿಂದ ಸಾಧಾರಣ ಮಳೆ ಬರುತ್ತಿರುವುದರಿಂದ ರೈತರು ಮಳೆಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಆದರೆ ಬೋರ್ವೆಲ್ಗಳು ರೀಚಾರ್ಜ್ ಆಗುವುದರಿಂದ ಅನುಕೂಲವಾಗಲಿದೆ. ಸದ್ಯಕ್ಕೆ ಈಗ ನೀರು ಬಿಟ್ಟಿರುವುದು ರೈತರನ್ನು ಸಂಕಷ್ಟದಿಂದ ಪಾರು ಮಾಡಿದಂತಾಗಿದೆ. ರೈತರಲ್ಲಿ ಈಗ ಮೆಕ್ಕೆಜೋಳ ಬಿತ್ತನೆಗೆ ಒಂದಷ್ಟು ಧೈರ್ಯ ಬಂದಂತಾಗಿದೆ.
ಉಡುಗಣಿ, ತಾಳಗುಂದ ಹೋಬಳಿ ಸೇರಿ ಹಲವು ಕಡೆಗಳಲ್ಲಿ ನಿಧಾನವಾಗಿ ರೈತರು ಭತ್ತದ ನಾಟಿ ಆರಂಭಿಸಿದ್ದಾರೆ. ತೋಟಗಳಿಗೂ ಅನುಕೂಲವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಅಭಾವ ಮತ್ತು ಅಂತರ್ಜಲ ಕುಸಿತದಿಂದಾಗಿ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿತ್ತು. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಮತ್ತು ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಈ ಭಾಗರ ರೈತರ ಪಾಲಿಗೆ ಯೋಜನೆಗಳು ಸಂಜೀವಿನಿಯಾಗಿ ಪರಿಣಮಿಸಿವೆ.
ಬರಗಾಲದಿಂದ ಬಳಲುತ್ತಿದ್ದ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ಆಸರೆಯಾಗಿದೆ. ಹಿರೇಕೆರೂರು ತಾಲೂಕಿನ ಪುರದಕೆರೆ ಹತ್ತಿರದ ತುಂಗಭದ್ರಾ ನದಿಯಿಂದ ಪೈಪ್ಲೈನ್ ಮೂಲಕ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಯ ಸುಮಾರು 280ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.
ಶಿವಮೊಗ್ಗ ಹತ್ತಿರದ ಹೊಸಳ್ಳಿಯಿಂದ ಪೈಪ್ಲೈನ್ ಮೂಲಕ ಅಂಜನಾಪುರ ಜಲಾಶಯಕ್ಕೆ ನೀರು ಹರಿಸಿ, ಅದರ ಮೂಲಕ ಆ ಭಾಗದ ಕೆರೆಗಳಿಗೆ ನೀರು ತುಂಬಿಸಿರುವ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಕಾಳೇನಹಳ್ಳಿ ಸಮೀಪದಲ್ಲಿ ನಿರ್ಮಿಸಿರುವ ಬ್ಯಾರೇಜ್ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.
ತಾಲೂಕಿನ ರೈತರ ಜೀವನಾಡಿಗಳಾದ ಅಂಜನಾಪುರ ಜಲಾಶಯ ಮತ್ತು ಅಂಬ್ಲಿಗೊಳದಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಿದೆ. ಅಂಜನಾಪುರ ಜಲಾಶಯಲ್ಲಿ 5 ಅಡಿ ನೀರಿದ್ದು ಅಂಬ್ಲಿಗೊಳ ಜಲಾಶಯದಲ್ಲಿ 7 ಅಡಿಯಷ್ಟು ಮಾತ್ರ ನೀರಿದೆ. ಪ್ರತಿವರ್ಷದಂತೆ ಮಳೆಯಾಗಿದ್ದರೆ ಈ ಹೊತ್ತಿಗೆ ಅಂಜನಾಪುರ ಜಲಾಶಯದಲ್ಲಿ ಹದಿನೈದು ಅಡಿಗೂ ಹೆಚ್ಚು ನೀರು ಇರುತ್ತಿತ್ತು. ಜುಲೈ ಕಡೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಜಲಾಶಯ ಕೋಡಿ ಬೀಳುತ್ತಿತ್ತು. ಆದರೆ ಈಗ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಕಾಯ್ದಿರಿಸಬೇಕಾಗಿದೆ.
ಶಾಶ್ವತ ನೀರಾವರಿ ಯೋಜನೆ ಮೂಲಕ ತಾಲೂಕಿನ ರೈತರ ಬಹಳ ವರ್ಷಗಳ ಕನಸಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಕೃಷಿಗೆ ಅನುಕೂಲವಾಗಲು ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗಳ ಮೂಲಕ ರೈತರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ಬಿಡಲಾಗಿದೆ.
> ಬಿ.ವೈ.ರಾವೇಂದ್ರ, ಲೋಕಸಭಾ ಸದಸ್ಯ
ತುಂಗಭದ್ರಾ ನೀರಿನ ಹರಿವು ಜಾಸ್ತಿಯಾಗುತ್ತಿದೆ. ಹಾಗಾಗಿ ರೈತರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೂ ಪೂರ್ಣ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಮಳೆಯಾದರೆ ಯಾವುದೇ ರೀತಿಯ ತೊಂದರೆಗಳಿಲ್ಲ.