ಸಾಗರ ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ. ಗುಂಪುಗುಂಪಾಗಿ ಓಡಾಡುತ್ತ ಬೊಗಳುವ ಕರ್ಕಶ ಶಬ್ಧ ಅನೇಕರ ನಿದ್ದೆ ಕೆಡಿಸಿದೆ. ರಾತ್ರಿ ವೇಳೆ ಮನೆಮಂದಿ ನಿದ್ದೆ ಮಾಡಲು ಸಾಧ್ಯವಾಗದೆ
ಹೊರಗಡೆ ಬಂದು ಬೀದಿನಾಯಿಗಳನ್ನು ಓಡಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಶಾಲೆ, ದೇವಸ್ಥಾನ, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿ ಸೇರಿ ಎಲ್ಲ ಕಡೆಗಳಲ್ಲೂ ನಾಯಿ ಕಾಟ ಹೆಚ್ಚಿದೆ. ದಿನೇದಿನೆ ಮಕ್ಕಳು ಹಾಗೂ ಪಾಲಕರಿಗೆ ನಾಯಿ ಕಚ್ಚಿರುವ ಘಟನೆಗಳು ಹೆಚ್ಚುತ್ತಿವೆ. ನಾಯಿ
ಹಾವಳಿಯಿಂದ ಬೇಸರಗೊಂಡ ಜನತೆ ಹಲವು ಬಾರಿ ಆಸ್ಪತ್ರೆ, ನಗರಸಭೆ ಎದುರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಒಟ್ಟಾರೆ ನಾಯಿಗಳ ಹಾವಳಿ ಜನತೆ ಹಾಗೂ ನಗರಸಭೆಗೆ ತಲೆನೋವಾಗಿ
ಪರಿಣಮಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಾಗರ ನಗರಸಭೆ ಸಾರ್ವಜನಿಕ ಪ್ರಕಟಣೆ ನೀಡಿದೆ. ಖಾಸಗಿ ಸಂಘ ಸಂಸ್ಥೆ, ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಇತರ ಕಡೆಗಳಲ್ಲಿ
ಬೀದಿನಾಯಿಗಳ ನಿಯಂತ್ರಣಕ್ಕೆ ಕಾನೂನು ಅನ್ವಯ ಸೂಚನೆ ನೀಡಲಾಗಿದೆ.
ಬೀದಿನಾಯಿಗಳು ಹೆಚ್ಚಾಗಿ ವಾಸವಿದ್ದಲ್ಲಿ ಪರಿಶೀಲಿಸಿ ಸಂಸ್ಥೆಯ ಸಂಬಂಧಪಟ್ಟವರು ನಗರಸಭೆಗೆ ಮಾಹಿತಿ ನೀಡಬೇಕು. ಬೀದಿ ನಾಯಿಗಳ ಉಪಟಳ ತಡೆಯಲು ಅದರ ನಿಯಂತ್ರಣಕ್ಕೆ ಒರ್ವ
ಬೀದಿನಾಯಿಗಳನ್ನು ದತ್ತು ಪಡೆದು ನಗರಸಭೆ ಸೂಚಿಸಿದ ಸ್ಥಳದಲ್ಲಿ ನಿರ್ವಹಣೆ ಮಾಡಲು ಆಸಕ್ತಿ ಇರುವ ಪ್ರಾಣಿಪ್ರಿಯರು ಕಚೇರಿಗೆ ಅರ್ಜಿ ಸಲ್ಲಿಸಲು ಕೂಡಾ ಅವಕಾಶ ಒದಗಿಸಲಾಗಿದೆ. ನ್ಯಾಯಾಲಯದ
ಆದೇಶ ಉಲ್ಲಂಸಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ತಿಳಿಸಿದೆ. ಒಟ್ಟಾರೆ ಬೀದಿನಾಯಿಗಳ ಕಾಪಾಡಲು ಮತ್ತು ರಕ್ಷಣೆಗೆ ನಗರಸಭೆ ಬಿಗಿಕ್ರಮ ಕೈಗೊಳ್ಳುವ
ಅವಶ್ಯಕತೆಯಿದೆ.
ಸಂತಾನಶಕ್ತಿ ಹರಣ
ಸಾಗರ ನಗರಸಭೆ ವ್ಯಾಪ್ತಿಯಲ್ಲಿ 2,832 ಬೀದಿನಾಯಿಗಳನ್ನು ಗುರುತಿಸಲಾಗಿದೆ. 2022-23ರಲ್ಲಿ 1,168 ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮುಂಬರುವ ತಿಂಗಳಿನಲ್ಲಿ ಇನ್ನು 1,000
ಬೀದಿನಾಯಿಗಳಿಗೆ ಶಸಚಿಕಿತ್ಸೆ ನಡೆಸಲಾಗುತ್ತಿದೆ. ಬೆಂಗಳೂರಿನ ಸಂಸ್ಥೆಯೊಂದು ಇದರ ಜವಾಬ್ದಾರಿ ಹೊತ್ತಿದೆ. 5 ನುರಿತ ವೈದ್ಯರನ್ನು ಒಳಗೊಂಡಂತೆ 10 ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ
ನಗರಸಭೆಯಿಂದ 20 ಲಕ್ಷ ರೂ. ವೆಚ್ಚ ಭರಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಂತರ ಕೆಲದಿನಗಳ ಕಾಲ ಬೀದಿನಾಯಿಗಳ ಆರೈಕೆ ಮಾಡಲಾಗುತ್ತದೆ. ಬೀದಿನಾಯಿಗಳ ಉಪಟಳ ನಿಯಂತ್ರಿಸಬೇಕಿರುವ
ನಗರಸಭೆಯು ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನು ಬಿಸಾಡುವವರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಗೂಳಿ ಕಾಟವೂ ಹೆಚ್ಚಳ
ಸಾಗರ ನಗರದಲ್ಲಿ ನಾಯಿ ಜತೆಯಲ್ಲಿ ಬಿಡಾಡಿ ದನಗಳು, ಗೂಳಿಗಳ ಕಾಟವೂ ಹೆಚ್ಚಾಗಿದೆ. ಕಿರಾಣಿ ಅಂಗಡಿಗಳಲ್ಲಿ ಇತ್ತ ಗಿರಾಕಿಗಳ ಜತೆ ವ್ಯವಹಾರ ಮಾಡುತ್ತಿರುವವರು ಬರುವ ಗೂಳಿಗಳನ್ನು
ಓಡಿಸುವಲ್ಲಿ ಹೈರಾಣವಾಗಿರುವ ಪರಿಸ್ಥಿತಿಯಿದೆ. ಗುರುವಾರ ಸಾಗರ ಸಂತೆ ಸಂದರ್ಭದಲ್ಲಿ ಸಮೀಪದ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು, ಸಾರ್ವಜನಿಕರು ಹಲವು ಬಾರಿ ಗೂಳಿ
ಮತ್ತು ನಾಯಿಗಳಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿದ್ದು, 8 ತಿಂಗಳಲ್ಲಿ 6 ಪ್ರಕರಣ ಗಮನಕ್ಕೆ ಬಂದಿವೆ. 2 ಪ್ರಕರಣದಲ್ಲಿ ಸಮಸ್ಯೆಗೆ ಒಳಗಾದವರಿಗೆ ನಗರಸಭೆಯಿಂದ ಆರ್ಥಿಕ ಸಹಕಾರ
ನೀಡಲಾಗಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಆಹಾರ ವಸ್ತುಗಳನ್ನು ಎಸೆಯುವುದರಿಂದ ಮತ್ತು ತ್ಯಾಜ್ಯಗಳ ನಿರ್ವಹಣೆ ವ್ಯವಸ್ಥಿತವಾಗಿ ಪೂರೈಸದಿರುವುದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ.
ನಾಗರಿಕರು ಕೂಡ ನಮ್ಮೊಂದಿಗೆ ಸಹಕರಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಮುಂದಿನ ದಿನಗಳಲ್ಲಿ ಬೀದಿನಾಯಿಗಳಿಗೆ ಸಂಬಂಧಿಸಿ ನಿರ್ವಹಣೆ ಕುರಿತು ಕ್ರಮ ಕೈಗೊಳ್ಳಲಾಗುವುದು.
ಎಚ್.ಕೆ.ನಾಗಪ್ಪ. ಸಾಗರ ನಗರಸಭೆ ಪೌರಾಯುಕ್ತ
ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಈಗಾಗಲೇ ಸಭೆ ನಡೆಸಿ ಎಲ್ಲ ರೀತಿ ಅಗತ್ಯ ಕ್ರಮ ಕೈಗೊಂಡಿದೆ. ಶಾಲೆ ಕಾಂಪೌಂಡ್ ಪ್ರದೇಶಗಳಲ್ಲಿ ವಾಸವಿರುವ
ಬೀದಿನಾಯಿಗಳ ವಿವರ ಪಡೆಯಲಾಗಿದೆ. 1,267 ಬೀದಿನಾಯಿಗಳನ್ನು ಗುರುತಿಸಿದ್ದು, ಅವುಗಳ ಶಸಚಿಕಿತ್ಸೆ ನಡೆಸಿ ಮುಂದಿನ ದಿನಗಳಲ್ಲಿ ಅವುಗಳನ್ನು ಹೊರಗೆ ಬಿಡದೆ ವ್ಯವಸ್ಥಿತವಾಗಿ ಸಾಕುವ
ಜವಾಬ್ದಾರಿಯನ್ನು ನಗರಸಭೆ ಮೂಲಕ ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ.
ಡಾ. ಎನ್.ಪಿ.ಮಂಜುನಾಥ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಾಗರ ನಗರಸಭೆ ಬೀದಿನಾಯಿಗಳಿಗೆ ಸಂಬಂಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬೀದಿ ನಾಯಿಗಳಿಗೆ ವ್ಯವಸ್ಥಿತ ಸೂರು ನಿರ್ಮಿಸಿಕೊಡುವ ಜತೆ ಅವುಗಳ
ಪಾಲನೆಗೂ ಮುಂದಾಗಬೇಕು. ಈ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕಾನೂನು ನಿಯಮಗಳು ಕಡ್ಡಾಯವಾಗಿ ಪಾಲನೆಯಾಗಬೇಕು.
ಕೆ.ಎಚ್.ಸುದರ್ಶನ, ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್ ಸದಸ್ಯ
ಕೆಲ ತಿಂಗಳ ಹಿಂದೆ ಬೀದಿನಾಯಿಯೊಂದು ನನಗೆ ಕಚ್ಚಿ ತೀವ್ರ ಸಮಸ್ಯೆಗೆ ಒಳಗಾದೆ. ನಂತರ ಚಿಕಿತ್ಸೆ ಪಡೆದೆ. ಸಾಗರ ನಗರಸಭೆಯು ಬೀದಿನಾಯಿಗಳ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಸುಪ್ರಿಂ ಕೋರ್ಟ್ ಇತ್ತೀಚೆಗೆ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು.