ಶಿಕಾರಿಪುರ: ಧಾರ್ಮಿಕ ಚಿಂತನೆಗಳು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿ, ಸದ್ವಿಚಾರಗಳನ್ನು ಹರಡುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ಗಾಮ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತ್ರೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿರೂಪ. ಇಂತಹ ಆಚಾರ ವಿಚಾರಗಳು ಹಿರಿಯರು ನಮಗೆ ನೀಡಿದ ಬಹುಮುಖ್ಯ ಬಳುವಳಿ ಎಂದರು.
ಶಿಕಾರಿಪುರ ತಾಲೂಕು ಶಿವಶರಣರ ನಾಡು. ಶರಣೆ ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ, ಶರಣ ಅಲ್ಲಮಪ್ರಭು, ಅನಿಮಿಷಾರ್ಯರು ಜನಿಸಿದ ವೈಚಾರಿಕ ನೆಲ. ಅಕ್ಕಮಹಾದೇವಿ ಜನಿಸಿದಂತಹ ಉಡುಗಣಿಯನ್ನು 65 ಕೋಟಿ ರೂ. ವೆಚ್ಚದಲ್ಲಿ ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಿಕಾರಿಪುರ ತಾಲೂಕು ಅಭಿವೃದ್ಧಿ ಹೊಂದುತ್ತಿರುವ ತಾಲೂಕುಗಳಲ್ಲಿ ಮುಂಚೂಣಿಯಲ್ಲಿದೆ. ಶಿಕಾರಿಪುರ ತಾಲೂಕು ದೇವಾಲಯ ಗಳ ಜೀರ್ಣೋದ್ಧಾರ ಮಾಡಲಾಗಿದೆ. ತಾಲೂಕಿನ ರೈತರ ಅನುಕೂಲಕ್ಕಾಗಿ ಶಾಶ್ವತ ನೀರಾವರಿ ಯೋಜನೆಯಡಿ ತಾಲೂಕಿನ ಎಲ್ಲ ಹೋಬಳಿಗಳ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ, ತಾಲೂಕು ಅಧ್ಯಕ್ಷ ವೀರನಗೌಡ, ಆರಾಧ್ಯ, ಪ್ರಭು, ಗಾಮದ ಚನ್ನವೀರಪ್ಪ ಇತರರಿದ್ದರು.