ಸೊರಬ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕರು ಗಮನಹರಿಸಲಿ ಎಂಬ ಹೇಳಿಕೆ ನೀಡಿದ ನನಗೆ ಕಾಂಗ್ರೆಸ್ ಮುಖಂಡರು ಏಕವಚನ ಬಳಸಿ ತೇಜೋವಧೆ ಮಾಡಿದ್ದಾರೆ. ಮಳೆ ಅಭಾವದಿಂದ ಬರಗಾಲ ಆವರಿಸಿದೆ. ರಸ್ತೆಗಳ ಪರಿಸ್ಥಿತಿ ಹದೆಗೆಟ್ಟಿದೆ. ಜನರ ಪರವಾಗಿ ಸಮಸ್ಯೆಗಳನ್ನು ಮುಂದಿಟ್ಟು ಮಾತನಾಡುವುದೇ ತಪ್ಪಾ ಎಂದು ಬಿಜೆಪಿ ಮುಖಂಡ ರಾಜು ಎಂ. ತಲ್ಲೂರು ಪ್ರಶ್ನಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಕನ್ನಡ ಓದು, ಬರಹದ ಸ್ಪಷ್ಟತೆ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆ ಕುರಿತು ಮಾತನಾಡಿದ್ದೇನೆ ಹೊರತು ವೈಯಕ್ತಿಕವಾಗಿ ಟೀಕಿಸಿಲ್ಲ. ಸಚಿವರಾಗಿ ತಾಲೂಕಿನ ಅಭಿವೃದ್ಧಿಗೆ ಎಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೀರಿ ಎಂಬುದನ್ನು ಜನತೆ ಮುಂದಿಡಿ ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಅವರು ನನ್ನ ವೈಯಕ್ತಿಕ ವಿಚಾರದ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ ವೇಳೆ ಪಕ್ಷದಿಂದ ನೀಡಿದ ಹಣವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಪಕ್ಷದಿಂದ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಆಧಾರ ಸಹಿತ ತೋರಿಸಲಿ. ಉದ್ಯಮಿಯಾಗಿ ನೂರಾರು ಮಂದಿಗೆ ಕೆಲಸ ನೀಡಿದ್ದೇನೆ. ಆದರೆ ಶಾಸಕರು ತಾಲೂಕಿಗೆ ಎಷ್ಟು ಉದ್ಯಮ ತಂದು, ಎಷ್ಟು ಜನರಿಗೆ ಉದ್ಯೋಗಾವಕಾಶ ನೀಡಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಅಧ್ಯಕ್ಷರು ಯಾರು ಎಂಬುದೇ ತಿಳಿದಿಲ್ಲ ಎಂದು ಕಾಂಗ್ರೆಸ್ ಮುಖಂಡ ಗಣಪತಿ ಹುಲ್ತಿಕೊಪ್ಪ ಲೇವಡಿ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಧ್ಯಕ್ಷರು ಯಾರೆಂದು ತಿಳಿದಿದೆ. ಕಾಂಗ್ರೆಸ್‌ನವರಿಗೆ ತಾಲೂಕು ಆಡಳಿತ ಹೊರತುಪಡಿಸಿ ರಾಜ್ಯ, ಜಿಲ್ಲೆಯ ರಾಜಕೀಯ ಕುರಿತು ಕನಿಷ್ಠ ತಿಳಿವಳಿಕೆಯೂ ಇಲ್ಲ. ನನ್ನನ್ನು ಕಂಡರೆ ನಿಮಗೆ ಭಯವೇಕೆ? ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಿ. ಆದರೆ ಏಕವಚನ ಬಳಸಿ ಮಾತನಾಡಿದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.