ಮೀಸಲು ಅರಣ್ಯ ವ್ಯಾಪ್ತಿಯಿಂದ ಜನವಸತಿ ಪ್ರದೇಶವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಗರ ಅರಣ್ಯ ಇಲಾಖೆ ಕಚೇರಿಯಿಂದ ನಾಡಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಸುರೇಶ ಸ್ವಾಮಿರಾವ್, ಸತೀಶ ಪಟೇಲ್, ಕರುಣಾಕರ ಶೆಟ್ಟಿ, ನಿತಿನ್, ಸುರೇಶ್ ಇತರರಿದ್ದರು.
ಹೊಸನಗರ: ತಾಲೂಕಿನ ನಗರ ಅರಣ್ಯ ಇಲಾಖೆ ಕಚೇರಿ ಎದುರು ನಡೆಸುತ್ತಿದ್ದ ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯುವುದಾಗಿ ಅರಣ್ಯ ಇಲಾಖೆ ವ್ಯವಸ್ಥಾಪನಾಧಿಕಾರಿ ಘೋಷಿಸಿದರು.
ವಲಯ ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ರಾಮಕೃಷ್ಣ ರೈತರ ಅಹವಾಲು ಆಲಿಸಿದರು. ನೋಟಿಸ್ ವಾಪಸ್ ಪಡೆಯುವಂತೆ ರೈತರ ಒತ್ತಾಯಕ್ಕೆ ಮಣಿದು, ಬೇಷರತ್ ಆಗಿ ವಾಪಸ್ ಪಡೆಯುವುದಾಗಿ ಘೋಷಿಸಿದರು. ನೋಟಿಸ್ ನೀಡಿದ್ದು ರೈತರ ಹಿತದೃಷ್ಟಿಯಿಂದ ಉತ್ತಮವಲ್ಲ. ಹಾಗಾಗಿ ಗ್ರಾಮದಲ್ಲಿರುವ ಜನವಸತಿ, ಜಾನುವಾರು, ಜಮೀನು ಈ ಬಗ್ಗೆ ಸಮಗ್ರ ಮಾಹಿತಿ ನೀಡಿದಲ್ಲಿ ಈ ಬಗ್ಗೆ ವಾಸ್ತವದ ಮಾಹಿತಿ ನೀಡಲು ಪೂರಕವಾಗುತ್ತದೆ ಎಂದರು.
ನಗರ ಹೋಬಳಿಯ 9 ಗ್ರಾಪಂಗಳ ಪ್ರತಿ ಗ್ರಾಮಗಳ ಜನವಸತಿ, ಜಾನುವಾರು, ಒತ್ತುವರಿ ಹೀಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವ್ಯವಸ್ಥಾಪನಾ ಅಧಿಕಾರಿಗೆ ನೀಡಲು ಪ್ರತಿಭಟನಾ ಸಭೆಯಲ್ಲಿ ನಿರ್ಧರಿಸಲಾಯಿತು.
1980ರ ಆದೇಶ ಇಟ್ಟುಕೊಂಡು ಈವರೆಗೂ ಮೀಸಲು ಅರಣ್ಯ ಮಾಡದಿರುವುದು ಸರ್ಕಾರದ ತಪ್ಪು. ಈಗ ಮೀಸಲು ಅರಣ್ಯ ಮಾಡುವುದಾದರೆ ಜನವಸತಿ ಪ್ರದೇಶವನ್ನು ಕೈಬಿಡಬೇಕು. 1964ರ ಆದೇಶ ಇಟ್ಟುಕೊಂಡು ಹಸ್ತಾಂತರ ಅರಣ್ಯ ಎಂದು ಬಿಂಬಿಸಲಾಗುತ್ತಿದೆ. ಇದನ್ನು ಮೊದಲು ರದ್ದು ಮಾಡಬೇಕು ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸಿದರು.