ಕೃಷಿ ಜತೆಗೆ ಉಪಕಸುಬು ಲಾಭದಾಯಕ | WorkShop

ಶಿಕಾರಿಪುರದಲ್ಲಿ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಣೆ ಉಚಿತ ತರಬೇತಿ ಕಾರ್ಯಾಗಾರವನ್ನು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಉದ್ಘಾಟಿಸಿದರು. ಹುಲ್ಮಾರ್ ಮಹೇಶ್, ಬಿ.ಸಿ.ವೇಣುಗೋಪಾಲ್, ಗಂಗಾಧರ್, ಪುಷ್ಪಾ ಮಂಜಪ್ಪ ಇತರರಿದ್ದರು.
ಶಿಕಾರಿಪುರದಲ್ಲಿ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಣೆ ಉಚಿತ ತರಬೇತಿ ಕಾರ್ಯಾಗಾರವನ್ನು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಉದ್ಘಾಟಿಸಿದರು. ಹುಲ್ಮಾರ್ ಮಹೇಶ್, ಬಿ.ಸಿ.ವೇಣುಗೋಪಾಲ್, ಗಂಗಾಧರ್, ಪುಷ್ಪಾ ಮಂಜಪ್ಪ ಇತರರಿದ್ದರು.
Published on
ಶಿಕಾರಿಪುರ: ಬೆಳೆ ಹಾನಿ, ಅನಾವೃಷ್ಟಿ ಹಾಗೂ ಮಳೆಯ ಅಭಾವದಿಂದ ಕೃಷಿಯಲ್ಲಿ ಎದುರಾಗುವ ಸವಾಲುಗಳಿಗೆ ಕುರಿ ಮತ್ತು ಮೇಕೆ ಸಾಕಣೆ ಅತ್ಯುತ್ತಮ ಪರ್ಯಾಯ ಹಾಗೂ ಲಾಭದಾಯಕ ಉಪಕಸುಬು ಎಂದು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಣೆ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರ ಆರ್ಥಿಕ ಸಬಲೀಕರಣ, ಉಪ ಕಸುಬುಗಳು, ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗಾವಕಾಶದ ಬಗ್ಗೆ ತಜ್ಞರು ವಿಸ್ತೃತ ಮಾಹಿತಿ ನೀಡಲಿದ್ದಾರೆ. ಇದು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಆರಂಭಿಸಬಹುದಾದ ಕಸುಬು. ಅಲ್ಪಾವಧಿಯಲ್ಲಿಯೇ ಉತ್ತಮ ಆದಾಯ ತಂದುಕೊಡುತ್ತದೆ. ಕೃಷಿ ಆದಾಯವು ಋತುಮಾನಕ್ಕೆ ತಕ್ಕಂತೆ ಇದ್ದರೆ ಕುರಿ ಮತ್ತು ಮೇಕೆ ಸಾಕಣೆಯು ವರ್ಷವಿಡೀ ಆರ್ಥಿಕ ಆಸರೆ ನೀಡುತ್ತದೆ ಎಂದರು.
ಕಡಿಮೆ ಜಮೀನು ಹೊಂದಿರುವ ಹಾಗೂ ಭೂರಹಿತ ಕೃಷಿ ಕಾರ್ಮಿಕರಿಗೂ ಇದು ಅತ್ಯಂತ ಸೂಕ್ತ ಕಸುಬು.ತುರ್ತು ಆರ್ಥಿಕ ಅಗತ್ಯತೆ ಎದುರಾದಾಗ ಅಥವಾ ಶಾಲಾ ಕಾಲೇಜು ಶುಲ್ಕ, ವೈದ್ಯಕೀಯ ವೆಚ್ಚಗಳಿದ್ದಾಗ ತಕ್ಷಣವೇ ಮಾರಾಟ ಮಾಡಿ ಹಣ ಪಡೆಯಬಹುದು ಎಂದು ತಿಳಿಸಿದರು.
ಶಿಕಾರಿಪುರ ಮುಖ್ಯ ಪಶುವೈದ್ಯಾಧಿಕಾರಿ ಎಂ.ರವಿ ಮಾತನಾಡಿ, ಕೃಷಿಯೊಂದಿಗೆ ಕುರಿ ಮತ್ತು ಮೇಕೆ ಸಾಕಣೆಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡರೆ ರೈತರು ಸ್ವಾವಲಂಬಿ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
ಕುರಿ, ಮೇಕೆಗಳ ಆರೋಗ್ಯಕರ ಬೆಳವಣಿಗೆಗೆ ಸ್ಟಾಲ್ ಫೀಡಿಂಗ್ ಪದ್ಧತಿ, ಪೌಷ್ಟಿಕ ಮೇವಿನ ನಿರ್ವಹಣೆ, ಲಸಿಕೆ ಹಾಕುವುದು, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಪಶುಪಾಲನಾ ಇಲಾಖೆಯಿಂದ ದೊರೆಯುವ ಸಾಲ ಸೌಲಭ್ಯ, ಅನುದಾನ ಮತ್ತು ಸರ್ಕಾರದ ಉಚಿತ ವಿಮಾ ಸೌಲಭ್ಯ ಕುರಿತು ಮಾಹಿತಿ ನೀಡಲಾಯಿತು.
ಬಿ.ಸಿ.ವೇಣುಗೋಪಾಲ್, ಗಂಗಾಧರ್, ಪುಷ್ಪಾ ಮಂಜಪ್ಪ, ರಾಮನಗೌಡ, ಡಾ. ಶ್ಯಾಮ್ಸುಂದರ್, ಡಾ. ಕಿರಣ್, ಡಾ. ನಿರಂಜನ್, ಅಭಿಲಾಷ್ ಬಾಳೇರ್, ಕೃಷಿಕ ಸಮಾಜದ ಪದಾಧಿಕಾರಿಗಳು, ವೈದ್ಯರು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net