ಸಾಗರ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ 69.64 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಐದು ವರ್ಷಗಳ ಹಿಂದೆ 1 ಕೋಟಿ ರೂ.ಗೂ ಅಧಿಕ ನಷ್ಟದಲ್ಲಿದ್ದ ಸಂಸ್ಥೆ ಈಗ ಲಾಭದತ್ತ ಸಾಗಲು ಆಡಳಿತ ಮಂಡಳಿಯ ಬದ್ದತೆ, ನೌಕರರ ಸಹಕಾರ ಹಾಗೂ ಪಾರದರ್ಶಕ ವ್ಯವಸ್ಥೆ ಕಾರಣ ಎಂದು ಅಧ್ಯಕ್ಷ ಎಚ್.ಎಸ್.ಗಣಪತಿ ರಾವ್ ಹೇಳಿದರು.
ಸಾಗರದಲ್ಲಿ ಪಿಕಾರ್ಡ್ ಬ್ಯಾಂಕ್‌ನ ಸರ್ವ ಸದಸ್ಯರ ಸಭೆ, ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಅರ್ಹ ರೈತರಿಗೆ ಶೇ.3 ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ವಿತರಿಸಲಾಗುತ್ತಿದೆ. ರಾಜ್ಯ ಬ್ಯಾಂಕ್‌ನಿಂದ 4.75 ಕೋಟಿ ರೂ. ಸಾಲ ವಿತರಿಸಿದ್ದು, ಸ್ವಂತ ಬಂಡವಾಳದಲ್ಲಿ 3.37 ಕೋಟಿ ರೂ. ಸಾಲ ನೀಡಿದ್ದೇವೆ. ನಮ್ಮ ಬ್ಯಾಂಕ್ ಶೇ. 98.6ರಷ್ಟು ಸಾಲ ವಸೂಲಾತಿ ಮಾಡಿದೆ ಎಂದರು.
ಷೇರುದಾರರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಸಹಕಾರ ಕಾನೂನು ವ್ಯಾಪ್ತಿಗೆ ಒಳಪಟ್ಟು ಎಲ್ಲ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬ್ಯಾಂಕ್ ಡಿಜಿಟಲೀಕರಣಗೊಳಿಸಿ, ಗ್ರಾಹಕರಿಗೆ ತ್ವರಿತಗತಿಯ ಸೇವೆ ನೀಡಲು ಮುಂದಿನ ದಿನಗಳಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು.
ಉಪಾಧ್ಯಕ್ಷ ಗಣಪತಿ, ನಿರ್ದೇಶಕರಾದ ದಿನೇಶ್ ಬರದವಳ್ಳಿ, ರಮೇಶ್ ಭಟ್, ಎಂ.ಕೆ.ದ್ಯಾವಪ್ಪ, ಶಿವಲೀಲಾ, ಜಯಾ ಆರ್. ಪೈ, ಪಿ.ಎನ್.ಸುಬ್ಬರಾವ್, ಮಹಾಬಲೇಶ್ವರ, ಕೃಷ್ಣಮೂರ್ತಿ, ನಿರಂಜನ, ಜಿಲ್ಲಾ ವ್ಯವಸ್ಥಾಪಕ ರಘುನಾಥ್, ಪ್ರಭಾರ ವ್ಯವಸ್ಥಾಪಕ ಶಂಕರಪ್ಪ ಇತರರಿದ್ದರು.