ಸಾಧನೆ ಹಾದಿಯಲ್ಲಿ ಮುನ್ನಡೆಯಲು ಮಾತೃಭಾಷೆ ಪರಿಪಕ್ವತೆ ಅವಶ್ಯಕ
ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ತಂಡಕ್ಕೆ ಹೈಕೋಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿನಂದಿಸಿದರು. ಎಸ್.ಎನ್.ನಾಗರಾಜ, ಎಂ.ಎಸ್.ಸಂತೋಷ, ಡಾ. ಎ.ಅನಲಾ, ಎಂ.ಎಸ್.ಅನಂತದತ್ತ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯ
ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪ
ಅಭಿವ್ಯಕ್ತಿಯ ಅದ್ಭುತ ಸಾಧನ ಮಾತೃಭಾಷೆ
ಶಿವಮೊಗ್ಗ: ಬದುಕಿನ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಮಾತೃಭಾಷೆ ಕಲಿಕೆಯಲ್ಲಿ ಪರಿಪಕ್ವತೆ ಅವಶ್ಯಕ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟರು.
ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಶನಿವಾರ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಾತೃಭಾಷೆ ಎಂಬುದು ಅಭಿವ್ಯಕ್ತಿಯ ಅದ್ಭುತ ಸಾಧನ. ರಾಜ್ಯೋತ್ಸವ ಆಚರಣೆ ಜತೆಗೆ ಭಾಷೆಯನ್ನು ಬೆಳೆಸಿ, ಸದಾ ಪ್ರಸ್ತುತ ಆಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅರಿತುಕೊಳ್ಳಬೇಕಿದೆ. ಮಾತೃಭಾಷೆಯಲ್ಲಿ ಸಾಧಿಸದವನು ಇತರ ಯಾವ ಭಾಷೆಯಲ್ಲಿ ಏನನ್ನೂ ಸಾಧಿಸಲಾರ. ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವಲ್ಲಿ ಕುವೆಂಪು ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಅನುಸಂಧಾನದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಎಂಬುದು ಅತ್ಯಮೂಲ್ಯ. ವೃತ್ತಿ ಧರ್ಮದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡಾಗ ಮಾತ್ರ, ಸವಾಲುಗಳನ್ನು ಎದುರಿಸುವ ಸ್ಥೈರ್ಯ ದೊರಕಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ, ಎನ್‌ಇಎಸ್ ನಿರ್ದೇಶಕ ಎಂ.ಎಸ್.ಅನಂತದತ್ತ, ಗೋವಾದ ಸಲಗಾಂವ್ಕರ್ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಾಬುಗೌಡ ಪಾಟೀಲ್, ಕಾರ್ಯಕ್ರಮ ಸಂಯೋಜಕರಾದ ಎಚ್.ಎ.ಸೌಮ್ಯ, ಮೇಘಾ ವಿಜಯ ಉಪಸ್ಥಿತರಿದ್ದರು.
ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ಪ್ರಥಮ
ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ತಂಡ ಪ್ರಥಮ ಬಹುಮಾನ ಪಡೆಯಿತು. ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಮತ್ತು ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನ ತಂಡ ಸಮಾಧಾನಕರ ಬಹುಮಾನ ಪಡೆಯಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಭಾಗವಹಿಸಿದ್ದವು.