ಆನಂದಪುರ: ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದೇ ನಮ್ಮ ಗುರಿ ಎಂದು ಉಪತಹಸೀಲ್ದಾರ್ ಶಾಂತಮೂರ್ತಿ ಹೇಳಿದರು.
ನಾಡಕಚೇರಿಯಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಬಡವರು, ಹಿಂದುಳಿದದವರು ಮತ್ತು ನಿರ್ಗತಿಕರಿಗೆ ಸರ್ಕಾರ ವಿವಿಧ ಯೋಜನೆ ರೂಪಿಸಿದೆ. ಈಗಾಗಲೇ ಅರ್ಜಿ ನೀಡಿರುವ ಫಲಾನುಭವಿಗಳಿಗೆ ಸವಲತ್ತು ಮಂಜೂರಾಗಿದೆ. ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಶೀಘ್ರ ಮಂಜೂರಾತಿ ನೀಡಲಾಗುವುದು ಎಂದರು.
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಮನಸ್ವಿನಿ, ಮೈತ್ರಿ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಹೊಸ ಮನವಿ ಪತ್ರ ಸ್ವೀಕಾರ ಕಾರ್ಯ ನಡೆಯಿತು.
ರಾಜಸ್ವ ನಿರೀಕ್ಷಕ ಕವಿರಾಜ್, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ವಿವಿಧ ಗ್ರಾಪಂ ಮಾಜಿ ಅಧ್ಯಕ್ಷರು ಮತ್ತು ಮಾಜಿ ಸದಸ್ಯರು ಪಾಲ್ಗೊಂಡಿದ್ದರು.