ಆಧುನಿಕ ಕೌಶಲಾಧಾರಿತ ಶಿಕ್ಷಣಕ್ಕೆ ನೀಡಬೇಕು ಆದ್ಯತೆ I modern skills

ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಎನ್.ಕುಮಾರಸ್ವಾಮಿ, ಬಸಪ್ಪ ಗೌಡ, ಕೆ.ಎನ್.ರುದ್ರಪ್ಪ ಕೊಳಲೆ, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರೊ. ಎಂ.ವೆಂಕಟೇಶ್ ಇದ್ದರು.
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಎನ್.ಕುಮಾರಸ್ವಾಮಿ, ಬಸಪ್ಪ ಗೌಡ, ಕೆ.ಎನ್.ರುದ್ರಪ್ಪ ಕೊಳಲೆ, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರೊ. ಎಂ.ವೆಂಕಟೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ, ಸಮಾಜಮುಖಿ ಸಂಶೋಧನೆ ಅವಶ್ಯ
  • ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಮತ
  • ಡಿವಿಎಸ್‌ನಲ್ಲಿ ವಿಚಾರ ಸಂಕಿರಣ ಉದ್ಘಾಟನೆ
ಶಿವಮೊಗ್ಗ: ಆರೋಗ್ಯ (health) ವಿಜ್ಞಾನ ಮತ್ತು ಜೀನೋಮಿಕ್ಸ್ ಕ್ಷೇತ್ರಗಳಲ್ಲಿನ ಸಂಶೋಧನೆಗಳು (research) ಮಾನವರ ಜೀವನದ ಗುಣಮಟ್ಟ (quality) ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗವು ಐಕ್ಯುಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಮತ್ತು ರೋಗಗಳಲ್ಲಿ ಆಣ್ವಿಕ ಕಾರ್ಯವಿಧಾನಗಳು ಹಾಗೂ ಜೀನೋಮಿಕ್ಸ್ ಒಳನೋಟಗಳು ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಪಠ್ಯಕ್ರಮ, ಕೇಂದ್ರಿತ ಕಲಿಕಾ ವಿಧಾನದಿಂದ ಹೊರಬಂದು ಆಧುನಿಕ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಸಂಶೋಧಕರು ಹೊಸ ಆಲೋಚನೆಗಳು ಮತ್ತು ವೈಜ್ಞಾನಿಕ ಮನೋಭಾವದೊಂದಿಗೆ ಸಮಾಜಮುಖಿ ಸಂಶೋಧನೆ ಕೈಗೊಳ್ಳಬೇಕು. ಪ್ರಮಾಣಪತ್ರ ಕೋರ್ಸ್‌ಗಳ ಮೂಲಕ ಹೊಸ ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಕೆ.ಕೇಶವ್ ಮಾತನಾಡಿ, ಅಣು ಜೀವಶಾಸ ಮತ್ತು ಜೀನೋಮಿಕ್ಸ್ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ರೋಗ, ನಿರ್ದಿಷ್ಟ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದಿವೆ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ವೆಂಕಟೇಶ್ ಮಾತನಾಡಿ, ಆರೋಗ್ಯ ಮತ್ತು ರೋಗಗಳಲ್ಲಿ ಆಣ್ವಿಕ ಕಾರ್ಯವಿಧಾನಗಳು ಹಾಗೂ ಜೀನೋಮಿಕ್ಸ್ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂತಹ ಕಾರ್ಯಕ್ರಮಗಳು ಜ್ಞಾನ ವಿನಿಮಯ ಹಾಗೂ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ, ಐಕ್ಯುಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ ಮಾತನಾಡಿದರು. ಡಿವಿಎಸ್ ಉಪಾಧ್ಯಕ್ಷ ಜಿ.ಮಧುಸೂದನ್, ಡಾ.ಎ.ಸತೀಶ್‌ಕುಮಾರ್ ಶೆಟ್ಟಿ, ನಿರ್ದೇಶಕ ಕೆ.ಎನ್.ರುದ್ರಪ್ಪ ಕೊಳಲೆ, ತಜ್ಞರು, ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
"

ಶಿಕ್ಷಣ ಸಂಸ್ಥೆಗಳು ಸಂಶೋಧನೆ, ನಾವೀನ್ಯತೆ ಮತ್ತು ಸಮಾಜಮುಖಿ ಚಿಂತನೆಗೆ ಉತ್ತೇಜನ ನೀಡುವ ವೇದಿಕೆಗಳಾಗಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

— ಬಸಪ್ಪ ಗೌಡ ಡಿವಿಎಸ್ ಸಮಿತಿ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net