ಆಸ್ಪತ್ರೆಗಳ ಮೂಲ ಸೌಕರ್ಯಕ್ಕೆ ಆದ್ಯತೆ

ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥಗೌಡ ಇದ್ದರು
ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥಗೌಡ ಇದ್ದರು
Published on
ತೀರ್ಥಹಳ್ಳಿ: ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದಕ್ಕಿಂತ ಮುಖ್ಯವಾಗಿ ಇರುವ ಆಸ್ಪತ್ರೆಗಳಿಗೆ ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಇಲ್ಲಿನ ತಾಲೂಕು ಸರ್ಕಾರಿ ಜೆಸಿ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್‌ಗೆ ಭೇಟಿ ನೀಡಿದ ವೇಳೆ ನವಜಾತ ಶಿಶುವಿಗೆ ಹೊದೆಸಿದ್ದ ಹೊಲಸು ಬಟ್ಟೆಯನ್ನು ಗಮನಿಸಿದ ಸಚಿವರು, ಆಸ್ಪತ್ರೆಯಲ್ಲಿ ಇನ್ನು ಮುಂದೆ ಶಿಶುಗಳಿಗೆ ಹೊದೆಸಲು ಶುಚಿಯಾದ ಬಟ್ಟೆ ಸೇರಿದಂತೆ ಯಾವುದೇ ರೀತಿಯ ಕೊರತೆಯಾಗಬಾರದು. ಬಾಣಂತಿಯರಿಗೆ ಸಿಗುವ ಸವಲತ್ತುಗಳಲ್ಲೂ ವಂಚನೆಯಾಗಬಾರದು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರುಗಳ ಕೊರತೆಯನ್ನು ನೀಗಿಸುವ ಸಲುವಾಗಿ ತಜ್ಞ ವೈದ್ಯರ ವಯೋನಿವೃತ್ತಿಯ ನಂತರ ಅದೇ ಹುದ್ದೆಯಲ್ಲಿ ಅವರನ್ನು ಐದು ವರ್ಷ ಸೇವೆಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ನಿಮಗಿರುವ ಕೊರತೆಯನ್ನು ನನ್ನ ಗಮನಕ್ಕೆ ತರಬೇಕು. ಜನ ಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆ ಹಾಗೂ ನಿಮ್ಮ ಬಗ್ಗೆ ಸಂಶಯ ಬಾರದಂತೆ ಕೆಲಸ ಮಾಡಬೇಕಿದೆ. ನೀವುಗಳು ನಿಷ್ಠೆಯಿಂದ ಕೆಲಸ ಮಾಡದಿದ್ದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ನಿಮ್ಮಗಳ ನಡುವೆ ಟೀಂ ವರ್ಕ್ ಕೂಡ ಅಗತ್ಯ ಎಂದು ಸಿಬ್ಬಂದಿಗೆ ತಾಕೀತು ಮಾಡಿದರು.
ಇದೇ ವೇಳೆ ಹೊರಗುತ್ತಿಗೆ ಆಧಾರದ ನೌಕರರಿಗೆ ಸಕಾಲದಲ್ಲಿ ವೇತನ ಬಿಡುಗಡೆಯಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆ ಸಹಾನುಭೂತಿ ಅಗತ್ಯ. ರಿಯಾಗಿ ವೇತನ ನೀಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸಬೇಕು. ಸಮಗ್ರ ವಿವರವನ್ನು ಕೊಡಿ ರಾಜ್ಯಾದ್ಯಂತ ಇರುವ ಈ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.
ಒಳ್ಳೆಯ ಉದ್ದೇಶದಿಂದ ಸ್ಥಾಪನೆಗೊಂಡಿರುವ ಮೆಡಿಕಲ್ ಕಾಲೇಜು ಹಾಗೂ ಎಲ್ಲ ಸವಲತ್ತಗಳೂ ಇದ್ದರೂ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಏಕೆ ಮಣಿಪಾಲ ಮತ್ತು ಕರಾವಳಿಯ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಸರ್ಕಾರಿ ಆಸ್ಪತ್ರೆ ಬಗ್ಗೆ ಸಾರ್ವಜನಿಕರ ಸಹಕಾರ ಬೇಕಿದೆ. ಕ್ರಿಕೆಟ್ ಮುಂತಾದ ಕ್ರೀಡಾ ಚಟುವಟಿಕೆಗಳಿಗೆ ಲಕ್ಷಾಂತರ ಹಣ ವಿನಿಯೋಗಿಸುವವರು ಸರ್ಕಾರಿ ಆಸ್ಪತ್ರೆಯ ಅಗತ್ಯಗಳಿಗೂ ಒಂದಿಷ್ಟು ನೆರವು ನೀಡಿದರೆ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ ಎಂದರು.
ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಡಿಎಚ್‌ಒ ಡಾ. ನಟರಾಜ್, ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರವಿಂದ್ ಮತ್ತು ಆಸ್ಪತ್ರೆಯ ಸಿಬ್ಬಂದಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net