ಸಮಷ್ಟಿಪ್ರಜ್ಞೆಗೆ ಪ್ರತಿಭಾ ಪುರಸ್ಕಾರ ವೇದಿಕೆ I pratiba puraskara

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಅನಘಾ ಅವರನ್ನು ಸರ್ಕಾರಿ ನೌಕರರ ಜಿಲ್ಲಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಬಿ.ವೈ.ರಾಘವೇಂದ್ರ, ಸಿ.ಎಸ್.ಷಡಾಕ್ಷರಿ, ಆರ್.ಮೋಹನ್‌ಕುಮಾರ್, ಆರ್.ಎಂ.ಮಂಜುನಾಥ ಗೌಡ, ಎಚ್.ಎಸ್.ಸುಂದರೇಶ್, ಪ್ರಭುಲಿಂಗ ಕವಳಿಕಟ್ಟಿ, ಕೆ.ಎಸ್.ಪವಿತ್ರಾ, ಸ್ವಾಮಿ ವೀರೇಶಾನಂದ ಸರಸ್ವತೀ, ಸ್ವಾಮಿ ವಿನಯಾನಂದ ಸರಸ್ವತೀ ಇದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಅನಘಾ ಅವರನ್ನು ಸರ್ಕಾರಿ ನೌಕರರ ಜಿಲ್ಲಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಬಿ.ವೈ.ರಾಘವೇಂದ್ರ, ಸಿ.ಎಸ್.ಷಡಾಕ್ಷರಿ, ಆರ್.ಮೋಹನ್‌ಕುಮಾರ್, ಆರ್.ಎಂ.ಮಂಜುನಾಥ ಗೌಡ, ಎಚ್.ಎಸ್.ಸುಂದರೇಶ್, ಪ್ರಭುಲಿಂಗ ಕವಳಿಕಟ್ಟಿ, ಕೆ.ಎಸ್.ಪವಿತ್ರಾ, ಸ್ವಾಮಿ ವೀರೇಶಾನಂದ ಸರಸ್ವತೀ, ಸ್ವಾಮಿ ವಿನಯಾನಂದ ಸರಸ್ವತೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಏಳು ವರ್ಷಗಳಲ್ಲಿ 21 ಕೋಟಿ ರೂ. ಖರ್ಚು
  • ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿಕೆ
  • ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ (sslc) ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ಸರ್ಕಾರಿ ನೌಕರರ (employes) ಮಕ್ಕಳನ್ನು ಗುರುತಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ತಲಾ ಎರಡು ಸಾವಿರ ರೂ. ನಗದು ಪುರಸ್ಕಾರ ನೀಡಲಾಗುತ್ತಿದೆ. ಏಳು ವರ್ಷಗಳಲ್ಲಿ ಈ ಕಾರ್ಯಕ್ರಮಕ್ಕಾಗಿ 21 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (shadakshari) ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಭಾನುವಾರ ಕುವೆಂಪು ರಂಗಮಂದಿದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಹುತೇಕ ಸರ್ಕಾರಿ ನೌಕರರು ಮಧ್ಯಮ ವರ್ಗದವರೇ ಆಗಿರುತ್ತಾರೆ. ತಮ್ಮ ಮಕ್ಕಳ ಸಾಧನೆಗೆ ದೊರೆಯುವ ಗೌರವದಿಂದಾಗಿ ಅವರು ಸಂತುಷ್ಟರಾಗಿರುವುದನ್ನು ಸಂಘಟನೆ ಗುರುತಿಸಿ ಈ ಕಾರ್ಯಕ್ರಮವನ್ನು ಮುಂದುವರಿಸಿದೆ ಎಂದರು.
ಇದರೊಂದಿಗೆ ಮಕ್ಕಳಲ್ಲಿ ಸಮಷ್ಟಿಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯ ಸಮರ್ಪಣೆಗೆ ವೇದಿಕೆ ಸಿಕ್ಕಂತಾಗುತ್ತದೆ. ನಮ್ಮ ಸಂಘಟನೆಯು ನೌಕರ ಸ್ನೇಹಿ ಮತ್ತು ಜನಸ್ನೇಹಿ ಕಾರ್ಯಕ್ರಮಗಳ ಆಯೋಜನೆ ಮೂಲಕ ದೇಶದ ಮಾದರಿ ಸಂಘಟನೆ ಅನಿಸಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಇನ್ನಷ್ಟು ಮಹತ್ವದ ವಿಷಯಗಳ ಕುರಿತು ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಅನುಷ್ಠಾನಗೊಳಿಸಲಾಗಿರುವ ಅನೇಕ ಯೋಜನೆಗಳಿಗೆ ನೌಕರರು ಫಲಾನುಭವಿಗಳಾಗಿದ್ದಾರೆ. ನೌಕರರ ಆರೋಗ್ಯಕ್ಕೆ ಸಂಬಂಧಿಸಿದಂತೆ 450 ಕೋಟಿ ರೂ. ವೆಚ್ಚದ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿಗಳು ಈಗಾಗಲೆ ಚಾಲನೆ ನೀಡಿದ್ದಾರೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮನೋವೈದ್ಯೆ ಡಾ. ಕೆ.ಎಸ್.ಪವಿತ್ರಾ ಆರೋಗ್ಯ ಮತ್ತು ಮಹಿಳೆಯ ಕಲ್ಯಾಣ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀ, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತೀ ಉಪನ್ಯಾಸ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸರ್ಕಾರ-ನೌಕರರ ನಡುವೆ ಸೇತುವೆ

ಈ ಸಂಘವು ರಾಜ್ಯ ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವೆ ಸೇತುವೆಯಾಗಿದೆ. ಅಗತ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದರ ಜತೆಗೆ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಸೌಹಾರ್ದ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಿ.ವೈ.ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಇದುವರೆಗೆ 10 ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ನಗದು ಪುರಸ್ಕಾರ, ಸ್ಮರಣಿಕೆ ನೀಡಿ, ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿರುವುದು ಶ್ಲಾಘನೀಯ ಕಾರ್ಯ. ನೌಕರರು ಮಾತ್ರವಲ್ಲ ಅವರ ಕುಟುಂಬದವರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಈ ಅಮೂಲ್ಯ ಸಂಪ್ರದಾಯ ಮುಂದುವರಿಸುತ್ತಿರುವುದು ನೌಕರರೆಲ್ಲರಿಗೆ ಅಭಿಮಾನದ ಸಂಗತಿಯಾಗಿದೆ ಎಂದರು.
"

ಪುರುಷರಿಗೆ ಸಮಾನಾಗಿ ಕಾರ್ಯ ನಿರ್ವಹಿಸುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ. ವ್ಯವಹಾರಿಕವಾಗಿ, ಕೌಟುಂಬಿಕ ನೆಮ್ಮದಿಗೆ ಮಹಿಳೆ ಸಹಕಾರಿಯಾಗಿದ್ದಾಳೆ. ಲಭ್ಯ ಅವಕಾಶಗಳನ್ನು ಬಳಸಿಕೊಂಡಿರುವ ಮಹಿಳೆ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ.

— ಆರ್.ಎಂ.ಮಂಜುನಾಥ ಗೌಡ, ಎಂಎಡಿಬಿ ಅಧ್ಯಕ್ಷ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net