ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ಆಘಾತ ನಿಶ್ಚಿತ | protest
ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ರೈತ ಸಂಘದ ಪ್ರಮುಖರು ಸಾಗರದಲ್ಲಿ ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿವಾನಂದ ಕುಗ್ವೆ, ಸುಂದರ ಸಿಂಗ್, ಕುಮಾರಸ್ವಾಮಿ ಕೊಪ್ಪ, ಎನ್.ಡಿ.ವಸಂತಕುಮಾರ್, ಚಂದ್ರಶೇಖರ್, ಬೇಬಿ ಇತರರಿದ್ದರು.
ಸಾಗರ: ವಿದ್ಯುತ್ ಕಂಪನಿಗಳ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ರೈತ ಸಂಘದ ಪ್ರಮುಖರು ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯುತ್ ಖಾಸಗೀಕರಣದ ಮೂಲಕ ರೈತ ಸಮೂಹಕ್ಕೆ ಆಘಾತ ನೀಡುವ ಸಂಚು ನಡೆಯುತ್ತಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಟಾಟಾ ಕಂಪನಿ ವಿದ್ಯುತ್ ಸರಬರಾಜು ಗುತ್ತಿಗೆ ಹಿಡಿಯಲು ಮುಂದಾಗಿದೆ. ನಮ್ಮದೇ ವಿದ್ಯುತ್ ಜಾಲವನ್ನು ಬಳಸಿ ಅವರು ಲಾಭ ಗಳಿಸಿಕೊಳ್ಳುವ ಹುನ್ನಾರದ ಭಾಗ ಇದಾಗಿದೆ. ಸರ್ಕಾರಿ ಸ್ವಾಮ್ಯವಿದ್ದರೆ ಉತ್ತಮ ಸೇವೆ ಸಿಗುತ್ತದೆ. ಖಾಸಗಿಗೆ ವಹಿಸಿದರೆ ರೈತರು ಮತ್ತು ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿ ಮತ್ತೆ ಖಾಸಗೀಕರಣಕ್ಕೆ ಬಾಗಿಲು ತೆಗೆದಿದೆ. ರೈತರು ಖಾಸಗೀಕರಣದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ತುರ್ತಿದೆ. ಜೂ. 23ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಎಲ್ಲರೂ ಅಕ್ಷೇಪಣೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ರೈತರು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆದರೆ ರೈತರ ವಿರುದ್ಧ ಯೋಜನೆ ರೂಪಿಸುತ್ತಾರೆ. ಟಾಟಾ ಕಂಪನಿ ವಿದ್ಯುತ್ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದ್ದರೂ ರೈತರು ಪ್ರತಿಭಟನೆ ಮಾಡದಿರುವುದು ದುರದೃಷ್ಟಕರ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕಂಪನಿ ಖಾಸಗೀಕರಣ ನೀತಿಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ತಾಲೂಕು ಅಧ್ಯಕ್ಷ ಸುಂದರ ಸಿಂಗ್, ಪ್ರಮುಖರಾದ ಕುಮಾರಸ್ವಾಮಿ ಕೊಪ್ಪ, ಎನ್.ಡಿ.ವಸಂತಕುಮಾರ್, ರೇವಪ್ಪ, ಚಂದ್ರಶೇಖರ್, ಎಂ.ಬಿ.ಮಂಜಪ್ಪ, ಬೇಬಿ, ಎಚ್.ಬಿ.ರಾಘವೇಂದ್ರ, ರಮೇಶ್, ನಾಗರಾಜ್ ಇತರರಿದ್ದರು.