ಘಾಟ್ ರಸ್ತೆಗಳ ಕುಸಿತ ತಡೆಗೆ ಶಾಶ್ವತ ಪರಿಹಾರ | satish jarakiholi

ಎನ್.ಆರ್.ಪುರಕ್ಕೆ ಹೋಗುವ ಮಾರ್ಗದಲ್ಲಿ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ರತ್ನಾಕರ ಶೆಟ್ಟಿ ಮತ್ತಿತರರು ಗೌರವಿಸಿದರು.
ಎನ್.ಆರ್.ಪುರಕ್ಕೆ ಹೋಗುವ ಮಾರ್ಗದಲ್ಲಿ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ರತ್ನಾಕರ ಶೆಟ್ಟಿ ಮತ್ತಿತರರು ಗೌರವಿಸಿದರು.
Published on
ತೀರ್ಥಹಳ್ಳಿ: ಪಶ್ಚಿಮಘಟ್ಟ ವ್ಯಾಪ್ತಿಯ ಘಾಟ್ ರಸ್ತೆಗಳಲ್ಲಿ ಸಂಭವಿಸುವ ಭೂ ಕುಸಿತ ತಡೆಯಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ಅನಿವಾರ್ಯವಿದೆ. ಹುಲಿಕಲ್ ಘಾಟ್‌ನಲ್ಲಿ ಸಂಭವಿಸಿದ ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಎನ್.ಆರ್.ಪುರಕ್ಕೆ ಹೋಗುವ ಮಾರ್ಗ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಲಿಕಲ್ ಘಾಟ್ ಕಾಮಗಾರಿಯಲ್ಲಿ ಮುಂಜಾಗ್ರತೆ ವಹಿಸಬೇಕಿತ್ತು. ಇದರಲ್ಲಿ ಮೇಲ್ನೋಟಕ್ಕೆ ಗುತ್ತಿಗೆದಾರರು ಮತ್ತು ಇಲಾಖೆ ಕಡೆಯಿಂದಲೂ ತಪ್ಪಾಗಿದೆ. ಈ ಬಗ್ಗೆ ವರದಿ ಕೇಳಲಾಗಿದೆ. ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಗೈಡ್‌ಲೈನ್ ಪಾಲನೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಈ ಭಾಗದ ಐದಾರು ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಎರಡು ವರ್ಷಗಳ ಹಿಂದೆ ಕಾರವಾರದಲ್ಲಿ ಭೂ ಕುಸಿತ ಘಟನೆ ಕೂಡ ಎಚ್ಚರಿಕೆಯ ಘಂಟೆ. ಹೀಗಾಗಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೆಲವೊಮ್ಮೆ ಅರಣ್ಯ ಇಲಾಖೆಯಿಂದ ಎದುರಾಗುವ ತಾಂತ್ರಿಕ ಅಡಚಣೆಗಳು ನಮ್ಮ ನಿರ್ಧಾರಗಳಿಗೆ ತಡೆ ಉಂಟುಮಾಡುತ್ತಿವೆ. ಅನಿವಾರ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಸದಸ್ಯರು, ಕಾಂಗ್ರೆಸ್ ಪಕ್ಷದ ಪ್ರಮುಖರು ಸಚಿವರನ್ನು ಸ್ವಾಗತಿಸಿದರು.

ಆಗುಂಬೆ ಮಾರ್ಗ ಅಭಿವೃದ್ಧಿಗೆ ಆದ್ಯತೆ

ಬೆಂಗಳೂರು-ಕರಾವಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-169ಎ ಮಾರ್ಗದ ಆಗುಂಬೆ ಘಾಟ್ ಮಾರ್ಗ ಪ್ರಮುಖವಾಗಿದ್ದು, ಈ ಮಾರ್ಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ನಿರ್ಣಯ ಕೈಗೊಳ್ಳಬೇಕಿದೆ. ಇದಕ್ಕೆ ನಮ್ಮ ಸರ್ಕಾರ ಪೂರ್ಣ ಸಹಕಾರ ನೀಡಲಿದೆ. ಮುಂದಿನ ವಾರವೇ ಖುದ್ದಾಗಿ ಆಗುಂಬೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ಮಧ್ಯ ಕರ್ನಾಟಕದಿಂದ ಕರಾವಳಿಗೆ ಸಂಪರ್ಕ ಕಲ್ಪಿಸಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ಹಾಸನ-ಮಂಗಳೂರು ಹೆದ್ದಾರಿ ಕಾಮಗಾರಿ ಮುಗಿದಿದೆ. ಮೂಡಿಗೆರೆ-ಉಜಿರೆ ಕಾಮಗಾರಿ ಆರಂಭವಾಗಬೇಕಿದೆ. ಸಕಲೇಶಪುರ ಹೆದ್ದಾರಿ ವಿಸ್ತರಣೆ ಕಾರ್ಯ ನಡೆದಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net