ಮಳೆ ಆರ್ಭಟಕ್ಕೆ ಬೆಚ್ಚಿದ ಶಿವಮೊಗ್ಗ ಜನತೆ I heavy rain

ಶಿವಮೊಗ್ಗದ ಮನೆಯೊಂದಕ್ಕೆ ನುಗ್ಗಿದ ಮಳೆ ನೀರನ್ನು ಹೊರಹಾಕುತ್ತಿರುವ ಮಹಿಳೆ
ಶಿವಮೊಗ್ಗದ ಮನೆಯೊಂದಕ್ಕೆ ನುಗ್ಗಿದ ಮಳೆ ನೀರನ್ನು ಹೊರಹಾಕುತ್ತಿರುವ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ಆಲ್ಕೊಳ ಸಮೀಪದ ಎಫ್‌ಸಿಐ ಕಾಂಪೌಂಡ್ ಗೊಡೆ ಕುಸಿತ
  • ವಿವಿಧ ಬಡಾವಣೆಗಳಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು
  • ಒಂದು ಗಂಟೆ ಗುಡುಗು ಸಿಡಿಲು ಸಹಿತ ಮಳೆ
ಶಿವಮೊಗ್ಗ; ತಡರಾತ್ರಿ ಸುರಿದ ಮಳೆ (rain) ಗೆ ಶಿವಮೊಗ್ಗ (shivamogga) ನಗರದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಮಂಗಳವಾರ (tuesday) ತಡರಾತ್ರಿ ನಿದ್ರೆಯಲ್ಲಿದ್ದ ಜನರು ಗುಡುಗು-ಸಿಡಿಲಿನ ಆರ್ಭಟದಿಂದ ಎದ್ದು ಕುಳಿತುಕೊಳ್ಳುವಂತಾಯಿತು. ಪಕ್ಕದಲ್ಲೇ ಸಿಡಿಲು ಹೊಡೆದ ಅನುಭವ ಅನೇಕರಿಗಾಯ್ತು.
ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ಆರ್ಭಟಿಸಿತು. ಗಾಳಿ ರಭಸ ಅಷ್ಟಾಗಿ ಇರಲಿಲ್ಲ. ಆದರೆ ಗುಡುಗು-ಸಿಡಿಲಿನ ಜುಗಲ್‌ಬಂದಿ ಮೇರೆ ಮೀರಿತ್ತು. ಈ ವರ್ಷ ಇಂತಹ ಮಳೆ ಅನುಭವ ಶಿವಮೊಗ್ಗದ ಜನರಿಗೆ ಆಗಿರಲೇ ಇಲ್ಲ.
ಗುಡುಗು-ಸಿಡಿಲಿನ ಆರ್ಭಟಕ್ಕೆ ಮನೆಯಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜನರು, ಮೊಬೈಲ್‌ಗಳನ್ನೂ ಸ್ವಿಚ್ ಆಫ್ ಮಾಡಿದರು. ಆದರೆ ಆತಂಕದ ಕಾರಣದಿಂದ ರಾತ್ರಿ ನಿದ್ರೆ ಹಾರಿ ಹೋಗಿತ್ತು. ಬಹುತೇಕ ತಗ್ಗು ಪ್ರದೇಶಗಳಲ್ಲಿ ಮನೆಯೊಳಕ್ಕೆ ನುಗ್ಗಿದ ನೀರು ಸಮಸ್ಯೆ ತಂದೊಡ್ಡಿತು.
ಒಂದು ತಿಂಗಳಿನಿಂದ ಆಗಾಗ ಮಳೆ ಬೀಳುತ್ತಿದ್ದರೂ ಇನ್ನೂ ಶಿವಮೊಗ್ಗದ ಸ್ಥಳೀಯ ಆಡಳಿತ ಮಳೆಗಾಲದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಚರಂಡಿ ಹಾಗೂ ರಾಜಕಾಲುವೆಗಳನ್ನು ಸ್ವಚ್ಛಗೊಳಿಸದ ಕಾರಣ ಮಳೆ ಬೀಳುತ್ತಿದ್ದಂತೆ ಚರಂಡಿಗಳು ಉಕ್ಕಿ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ.
ಮಂಗಳವಾರ ರಾತ್ರಿಯೂ ಇದು ಪುನರಾವರ್ತನೆಯಾಯಿತು. ಶರಾವತಿ ನಗರ, ಗೋಪಾಲಗೌಡ ಬಡಾವಣೆ, ಬಾಪೂಜಿ ನಗರ ಸೇರಿ ಅನೇಕ ಕಡೆಗಳಲ್ಲಿ ಮನೆಗೆ ನುಗ್ಗಿದ ನೀರನ್ನು ಹೊರಹಾಕುವುದೇ ಅಲ್ಲಿನ ನಿವಾಸಿಗಳಿಗೆ ತಲೆಬಿಸಿಯಾಯಿತು. ಮನೆಯೊಳಗಿದ್ದ ಬಟ್ಟೆ, ಪಾತ್ರೆ, ಕೆಲವು ವಿದ್ಯುತ್ ಉಪಕರಣಗಳು ನೀರಿನಿಂದ ಆವೃತವಾದವು.
ಶರಾವತಿ ನಗರದ 15 ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು. ಸಾಗರ ರಸ್ತೆಯ ಕೈಗಾರಿಕಾ ಪ್ರದೆಶದಲ್ಲಿರುವ ಎಸ್.ಎಸ್.ಇಂಡಸ್ಟ್ರೀಸ್‌ಗೆ ಮಳೆ ನೀರು ನುಗ್ಗಿತ್ತು. ಆಲ್ಕೊಳ ವೃತ್ತದ ಸಮೀಪವಿರುವ ಎಫ್‌ಸಿಐ ಕಾಂಪೌಂಡ್‌ನ ಕೆಲ ಭಾಗ ಕುಸಿದು ಬಿದ್ದಿತು. ಕುಸಿದು ಬಿದ್ದ ಗೋಡೆ ರಭಸಕ್ಕೆ ವಿದ್ಯುತ್ ಕಂಬವೊಂದು ನೆಲಕ್ಕುರುಳಿತು. ಈ ವೇಳೆ ಸರಕು ಸಾಗಣೆ ವಾಹನವೊಂದು ಜಖಂಗೊಂಡಿತು.

ಮಳೆ ನೀರಿಗೆ ಜನರು ಹೈರಾಣ

ಶಿವಮೊಗ್ಗ ಶರಾವತಿ ನಗರದ ಏಳನೇ ತಿರುವಿನ ನಿವಾಸಿಗಳಾದ ಗೌರಮ್ಮ, ಮಂಜುನಾಥ್, ಪದ್ಮಮ್ಮ, ಮಾದಯ್ಯ, ಲಿಲ್ಲಿ ಎಂಬುವರ ಮನೆಯೊಳಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿತ್ತು. ಮನೆಯೊಳಗಿದ್ದ ಅನೇಕ ಇಲೆಕ್ಟ್ರಾನಿಕ್ಸ್ ಉಪಕರಣಗಳು ಹಾಳಾಗಿವೆ. ನೀರು ನುಗ್ಗಿದ ಕಾರಣ ಮನೆಗಳ ಫ್ರಿಡ್ಜ್, ಟಿವಿ, ವಾಷಿಂಗ್ ಮಿಷನ್ ಯಂತ್ರೋಪಕರಣಗಳು ಹಾಳಾಗಿವೆ. ಇಲ್ಲಿನ ಮನೆಗಳು ತಗ್ಗಿನ ಪ್ರದೇಶದಲ್ಲಿ ಇರುವುದರಿಂದ ಮಳೆ ನೀರು ಸಲೀಸಾಗಿ ನುಗ್ಗಲಿದೆ. ಸಾಗರ ರಸ್ತೆಯಲ್ಲಿರುವ ಮುಳ್ಳು ತಂತಿ ಮತ್ತು ಚೈನ್‌ಲಿಂಕ್ ಮೆಷ್ ತಯಾರಿಸುವ ಕೈಗಾರಿಕೆಯೊಳಕ್ಕೆ ನೀರು ನುಗ್ಗಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೈಗಾರಿಕೊಳಗಿದ್ದ ವಸ್ತುಗಳನ್ನು ಹೊರಹಾಕಿದರು.

ದೇಮ್ಲಾಪುರದಲ್ಲಿ ಅತಿ ಹೆಚ್ಚು

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಅತ್ಯಧಿಕ 72.6 ಮಿ.ಮೀ. ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕು ದೇಮ್ಲಾಪುರದಲ್ಲಿ ಅತಿ ಹೆಚ್ಚು 46.5 ಮಿಮೀ ಮಳೆ ಬಿದ್ದಿದೆ. ಸೊರಬ ತಾಲೂಕು ತತ್ತೂರಿನಲ್ಲಿ 43.5, ಮೂಡಿ-ದೊಡ್ಡಿಕೊಪ್ಪದಲ್ಲಿ 42.50 ಮಿ.ಮೀ. ಮಳೆ ಸುರಿದಿದೆ. ಶಿವಮೊಗ್ಗ ತಾಲೂಕು ಕುಂಚೇನಹಳ್ಳಿಯಲ್ಲಿ 39, ಸೊರಬ ತಾಲೂಕು ಅಗಸನಹಳ್ಳಿಯಲ್ಲಿ 35, ಶಿವಮೊಗ್ಗದ ಅಬ್ಬಲಗೆರೆಯಲ್ಲಿ 26 ಹಾಗೂ ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಗ್ರಾಮದಲ್ಲಿ 23.5 ಮಿ.ಮೀ. ಮಳೆಯಾಯಿತು. ಶಿವಮೊಗ್ಗದ ಕೂಡ್ಲಿ, ಹೊಸನಗರ ತಾಲೂಕಿನ ಅರಸಾಳು, ಸೊರಬದ ಕುಬಟೂರು, ಶಿಕಾರಿಪುರ ತಾಲೂಕಿನ ನರಸಾಪುರ, ಹೊಸನಗರದ ಸುಳಗೋಡು, ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net