ಸಾಗರ: ನಾವು ಇತಿಹಾಸ ನಿರ್ಮಾಣ ಮಾಡಬೇಕು. ಇತಿಹಾಸದ ಒಂದು ಭಾಗವಾಗುವತ್ತ ಅದರ ಪ್ರಾಮುಖ್ಯತೆಯನ್ನು ಹೊಸ ತಲೆಮಾರಿಗೆ ತಲುಪಿಸಬೇಕು ಎಂದು ಉಪನ್ಯಾಸಕ ಪವನ್ ಕಿರಣಕೆರೆ ಹೇಳಿದರು
ಸಾಗರ ತಾಲೂಕಿನ ಹೆಗ್ಗೋಡು ಎಸ್. ರೂಪಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಅರಿವು ಸರಣಿ ಕಾರ್ಯಕ್ರಮದಡಿ ರಾಷ್ಟ್ರಧರ್ಮ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದರು.
ಬಹುತೇಕ ಸಂದರ್ಭದಲ್ಲಿ ಇತಿಹಾಸದಿಂದ ನಮಗೇನು ಲಾಭ ಎನ್ನುವ ಅಸಡ್ಡೆ ಮೂಡುತ್ತದೆ. ಇತಿಹಾಸ ಅರಿಯದೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಇನ್ನೊಬ್ಬರಿಗೆ ಮಾದರಿಯಾಗುವಂತಹ ಸಾಧನೆ ಮಾಡಬೇಕು. ನಾವು ಓದುತ್ತಿರುವ ಶಾಲೆಯಲ್ಲಿ ನಮ್ಮ ಕಠಿಣ ಅಭ್ಯಾಸವನ್ನು ಮೊದಲು ನಮ್ಮ ಸ್ನೇಹಿತರೇ ಅನುಸರಿಸುವಂತೆ ಆಗಬೇಕು. ನಾವು ಇನ್ನೊಬ್ಬರ ಮಾದರಿ ಅನುಸರಿಸುವುದಕ್ಕಿಂತ ಇನ್ನೊಬ್ಬರಿಗೆ ನಾವೇ ಮಾದರಿ ಆಗುವಲ್ಲಿ ಶ್ರೇಷ್ಠತೆ ಇರುತ್ತದೆ ಎಂದರು.
ಪ್ರಾಚಾರ್ಯ ಎಂ.ಎಸ್.ತಿಮ್ಮಪ್ಪ ಮಾತನಾಡಿ, ವಿದ್ಯಾರ್ಥಿಗಳ ಅರಿವಿನ ಆಳ ಹೆಚ್ಚಿಸಲು ಪ್ರತಿ ತಿಂಗಳು ಬೇರೆಬೇರೆ ವಿಷಯದ ಮೇಲೆ ಸರಣಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಅವರ ವ್ಯಕ್ತಿತ್ವ ವಿಕಸನ ಆಗಬೇಕು. ಎಂಥದ್ದೇ ಸವಾಲುಗಳು ಬಂದರೂ ಅದನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.