ಹೊಳೆಹೊನ್ನೂರು: ಬರೀ ಗುಂಡಿಗಳಿಂದ ಕೂಡಿರುವ ಕಲ್ಲಜ್ಜನಾಳ್ ಸಂಪರ್ಕ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಗ್ರಾಮಸ್ಥರು ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.
ಹನುಮಂತಾಪುರ- ಕಲ್ಲಜ್ಜನಾಳ್ ಸಂಪರ್ಕ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಅಪಘಾತಗಳು ಕೂಡಾ ಆಗುತ್ತಿವೆ. ಪ್ರಭಾವಿಗಳ ಮನೆ ಎದುರಿನ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆಗೆ ಅನುದಾನ ನೀಡುವ ಜನಪ್ರತಿನಿಧಿಗಳು ಸಾರ್ವಜನಿಕ ರಸ್ತೆ ದುರಸ್ತಿಗೆ ಮೀನಮೇಷ ಎಣಿಸುತ್ತಾರೆ ಎಂದು ದೂರಿದರು.
ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಕೂಡಲೇ ಗುಂಡಿಮಯ ರಸ್ತೆಯನ್ನು ಸರಿಪಡಿಸಬೇಕು. ಕೆರೆ ಏರಿ ರಸ್ತೆಯಾಗಿರುವುದರಿಂದ ಗುಂಡಿ ತಪ್ಪಿಸುವ ಭರದಲ್ಲಿ ವಾಹನ ಕೆರೆಗೆ ನುಗ್ಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.