ಸಾಗರ: ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಚ್ಚಾಟ ಆರಂಭವಾಗಿದೆ. ಇವರಿಗೆ ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಸಮಯ ಇಲ್ಲ. ಆದರೆ ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ, ಅಧಿಕಾರ ಪಡೆಯಲು ಉಪ ಮುಖ್ಯಮಂತ್ರಿಗಳು ಶಾಸಕರ ಖರೀದಿ ಆರಂಭಿಸಿದ್ದಾರೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಟೀಕಿಸಿದರು.
ರಾಜ್ಯ ಸರ್ಕಾರ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಅಭಿವೃದ್ಧಿಯಂತೂ ಶೂನ್ಯ. ಜತೆಗೆ ರೈತರು, ಬಡವರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಬ್ಬು ಬೆಳೆಗಾರರ ಪರ ಹೋರಾಟ ಮಾಡಿದ ಮೇಲೆ ಮುಖ್ಯಮಂತ್ರಿಗಳು ಎಚ್ಚೆತ್ತು ಕಬ್ಬಿನ ದರ ಜಾಸ್ತಿ ಮಾಡಿದ್ದಾರೆ. ಆದರೆ ಈತನಕ ಬೆಳೆಗಾರರಿಗೆ ಹಣ ಕೊಟ್ಟಿಲ್ಲ. ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಆದರೆ ಈತನಕ ಎಲ್ಲಿಯೂ ಆರಂಭ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮೌನವಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಾಗರ ತಾಲೂಕಿನಲ್ಲಿ ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಲಾಗುತ್ತಿದೆ. ಕೂಡಲೇ ನೋಟಿಸ್ ಹಿಂಪಡೆಯಬೇಕು. ಕೆರೆಹಳ್ಳಿ ಹೋಬಳಿಯಲ್ಲಿ ಮತ್ತೆ ಆನೆ ಹಾವಳಿ ಆರಂಭವಾಗಿದೆ. ಆನೆ ಹಾವಳಿ ನಿಯಂತ್ರಿಸಲು ಒತ್ತಾಯಿಸಿ ಶಿವಮೊಗ್ಗ ಗ್ರಾಮಾಂತರ ಮತ್ತು ಹೊಸನಗರ ತಾಲ್ಲೂಕಿನ ರೈತರು ಅರಸಾಳು ಗ್ರಾಮದಲ್ಲಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಅನುದಾನ ನೀಡುತ್ತಿದ್ದರು. ಈಗಿನ ಸರ್ಕಾರ 1.20 ಲಕ್ಷ ರೂ. ನೀಡುತ್ತಿದೆ. ಈ ಹಣ ಕಾರ್ಮಿಕರಿಗೆ ಕೊಡಲೂ ಸಾಕಾಗುತ್ತಿಲ್ಲ. ಸರ್ಕಾರ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಸಾಗರ ತಾಲೂಕಿನಲ್ಲಿ ರೈತರಿಗೆ ಯಾವುದೇ ಸೌಲಭ್ಯ ಸಿಗದಿರುವುದು ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ನ.29ರಂದು ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.