ತೀರ್ಥಹಳ್ಳಿ: ಕಡೇಮನೆವರೆಗಿನ ರಸ್ತೆ ಕಾಮಗಾರಿಗೆ ಬಿಡುಗಡೆಯಾಗಿದ್ದ ಹಣದಲ್ಲಿ ಪೂರ್ಣ ಕಾಮಗಾರಿ ಮಾಡದ ಶಾಸಕರು ಬಿಂತಳ ಗ್ರಾಮದವರೆಗೆ ಮಾತ್ರ ಮಾಡಿಸಿದ್ದಾರೆ. ಶಾಸಕರ ಈ ಕ್ರಮವನ್ನು ಖಂಡಿಸಿ ಬಿಂತಳ ಗ್ರಾಮದಿಂದ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ರಸ್ತೆ ಕಾಮಗಾರಿ ನಡೆಸುವಂತೆ ಆಗ್ರಹಿಸಿ ಸೋಮವಾರ ಶಾಲಾ ವಿದ್ಯಾರ್ಥಿಗಳು ಧರಣಿ ನಡೆಸಿದ್ದ ಕಡೇಮನೆ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಕಡೇಮನೆ ಗ್ರಾಮಕ್ಕೆ ಹೋಗುವ ರಸ್ತೆ ಮಾತ್ರವಲ್ಲದೆ ಈ ಮಾರ್ಗದಲ್ಲಿರುವ ಸೇತುವೆಯೂ ಶಿಥಿಲವಾಗಿದೆ. ಈ ಕಾಮಗಾರಿಗೆ ಕನಿಷ್ಠ ಎರಡೂವರೆ ಕೋಟಿ ರೂ. ಅಗತ್ಯವಿದೆ. ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಶಾಸಕರು ಅರೆಬರೆ ಕೆಲಸ ಮಾಡುವ ಮೂಲಕ ತಮ್ಮ ಸಂಬಂಧಿಗೆ ಅನುಕೂಲ ಮಾಡುವ ಸಲುವಾಗಿ ಇಲ್ಲಿಗೆ ಮಂಜೂರಾಗಿದ್ದ ಹಣವನ್ನು ಹುಲಿಕಲ್ ಘಾಟ್ ಕಾಮಗಾರಿಗೆ ನೀಡಿದ್ದಾರೆ. ಶಾಸಕರ ಪಕ್ಷಪಾತಿ ಧೋರಣೆಯನ್ನು ಖಂಡಿಸಿ ಬಿಂತಳದಿಂದ ಪಾದಯಾತ್ರೆ ನಡೆಸುವುದಾಗಿ ತಿಳಿಸಿದರು.
ದೇವಸ್ಥಾನಗಳ ಹುಂಡಿ ಹಣದ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಉತ್ತರ ಕೊಡಬೇಕಿದೆ. ಈ ಬಗ್ಗೆ ನಮ್ಮಲ್ಲಿ ಯಾರಾದರೂ ಉತ್ತರ ಕೊಡುತ್ತಾರೋ ನೋಡಬೇಕಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರು ಉತ್ತರ ಕೊಟ್ಟರೆ ಸಂತೋಷ. ಇಲ್ಲವಾದಲ್ಲಿ ನಾನೇ ಕೊಡುತ್ತೇನೆ ಎಂದರು.
ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಒ ಎಂ.ಶೈಲಾ, ಕಾಂಗ್ರೆಸ್ ಮುಖಂಡರಾದ ಕೆಸ್ತೂರು ಮಂಜುನಾಥ್, ಅಮರನಾಥ ಶೆಟ್ಟಿ, ಪೂರ್ಣೇಶ್, ಬೇಳೂರು ದಿನೇಶ್, ಸುಂದರೇಶ್, ಚಂದ್ರಪ್ಪ ಗೌಡ ಇದ್ದರು.