ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರ ಈಚೆಗೆ ತಮ್ಮ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿರುವುದು ಕಾನೂನುಬಾಹಿರ. ಶಾಸಕ ಹುದ್ದೆಯ ಘನತೆಗೂ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಶಾಸಕರಾಗಿ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕಿದೆ. ಆದರೆ ಅಧಿಕಾರಿಗಳ ನೈತಿಕತೆಯನ್ನೇ ಕುಂದಿಸುವಂತೆ ಕಚೇರಿಗೆ ನುಗ್ಗಿ, ಪ್ರತಿಭಟನೆ ನಡೆಸುವುದು ಶಾಸಕ ಹುದ್ದೆಯ ದುರ್ಬಳಕೆ. ಹಾಗಾಗಿ ಶಾಸಕರ ವಿರುದ್ಧ ದೂರು ದಾಖಲಿಸುವ ಬಗ್ಗೆ ಯೋಚಿಸಲಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಬಿಜೆಪಿಯವರೇ ಅತೀ ಹೆಚ್ಚು ಮಧ್ಯವರ್ತಿಗಳಿದ್ದಾರೆ. ಮರಳು ದಂಧೆ ಸೇರಿ ಎಲ್ಲ ಅಕ್ರಮಗಳೂ ಶಾಸಕರ ರಕ್ಷಣೆಯಲ್ಲೇ ನಡೆದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಳ್ಳಮಾವಾಸ್ಯೆ ಜಾತ್ರೆ ಸಮೀಪಿಸುವ ಹಂತದಲ್ಲಿ ಪಟ್ಟಣದ ರಾಮೇಶ್ವರ ದೇವಸ್ಥಾನದ ರಥದ ಚಕ್ರದ ನಿರ್ಮಾಣ ವಿಚಾರದಲ್ಲಿ ಖ್ಯಾತೆ ತೆಗೆದಿದ್ದ ಶಾಸಕರು, ಕೊನೇ ಕ್ಷಣದವರೆಗೂ ಚಕ್ರದ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಅಮೆರಿಕದಲ್ಲಿದ್ದ ನಾನು ಬಂದ ನಂತರ ವೈಯಕ್ತಿಕವಾಗಿ 2.50 ಲಕ್ಷ ರೂ. ವೆಚ್ಚದಲ್ಲಿ ಚಕ್ರ ನಿರ್ಮಾಣ ಮಾಡಿಸಿದ್ದೇನೆ. ಕ್ಷೇತ್ರದ ಶಾಸಕರಾದ ಇವರಿಗೆ ಹೊಣೆಗಾರಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಜನರ ಮನಸ್ಸಿನಿಂದ ಗಾಂಧೀಜಿ ಅವರ ಹೆಸರನ್ನು ಮರೆಯಾಗಿಸುವ ಮತ್ತು ಗ್ರಾಮೀಣ ಭಾಗದ ಬಡವರನ್ನು ವಂಚಿಸುವ ಉದ್ದೇಶದಿಂದಲೇ ಎನ್‌ಆರ್‌ಇಜಿ ಯೋಜನೆ ಹೆಸರು ಬದಲಿಸಿ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಹಾದಿ ತಪ್ಪಿಸುವ ಬಿಜೆಪಿ ಆಡಳಿತ ದೇಶಕ್ಕೆ ಮಾರಕ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈವರೆಗೆ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ನಡೆಸದೆ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಟೀಕಿಸಿದರು.
ಜನಪರ ಕಾಳಜಿ, ತಮ್ಮ ಸಾಧನೆಗಳ ಮೂಲಕ ದೇಶದಲ್ಲೇ ಉತ್ತಮ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರು ದೀರ್ಘಾವಧಿವರೆಗೆ ಆ ಸ್ಥಾನದಲ್ಲಿದ್ದು ದಾಖಲೆ ನಿರ್ಮಿಸಿದ್ದಾರೆ. ಅವರ ಆಡಳಿತದಲ್ಲಿ ಹಸಿವು, ಸಾಕ್ಷರತೆ, ಉದ್ಯೋಗ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಗಮನಾರ್ಹ. ಇದರಿಂದಾಗಿ ರಾಜ್ಯದ ಜನರ ತಲಾದಾಯ ಏರಿಕೆಯಾಗಿದೆ. ಹೊರ ರಾಜ್ಯಗಳ ಜನರು ಕರ್ನಾಟಕವನ್ನು ಬಯಸಿ ಬರುತ್ತಿದ್ದಾರೆ ಎಂದರು.