ಶಾಲೆಗಳ ಗೋಡೆ ಮೇಲೆ ಅಸಭ್ಯ ಬರಹ | childrens meeting

ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ತಮ್ಮ ಶಾಲೆಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತಿರುವುದು.
ರಿಪ್ಪನ್‌ಪೇಟೆ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ತಮ್ಮ ಶಾಲೆಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತಿರುವುದು.
Published on
ರಿಪ್ಪನ್‌ಪೇಟೆ: ಶಾಲೆ ಆವರಣದಲ್ಲಿ ಜಾನುವಾರು, ನಾಯಿ ಹಾಗೂ ಸಾರ್ವಜನಿಕರ ಸಂಚಾರ ನಿರಂತರವಾಗಿರುತ್ತದೆ. ಗೋಡೆಗಳ ಮೇಲೆ ಅಸಭ್ಯ ಬರಹ ಗೀಚುತ್ತಾರೆ. ಗಲೀಜು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಶಾಲೆ ಸುತ್ತ ಕಾಂಪೌಂಡ್ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಒಕ್ಕೊರಲಿಂದ ಆಗ್ರಹಿಸಿದರು.
ಮುಂಜಾಗ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು. ನೀರು ಬಳಕೆಗಾಗಿ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಬೇಕು. ಅಡಕೆ ತೋಟ ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳಿಗೆ ಮಣ್ಣು, ಗೊಬ್ಬರ ಬೇಕಿದೆ. ಹೀಗೆ ಹಲವು ಸಮಸ್ಯೆ, ಬೇಡಿಕೆಗಳನ್ನು ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಎದುರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತೆರೆದಿಟ್ಟರು.
ಇತ್ತೀಚೆಗೆ ಬೀಸಿದ ಸುಂಟರಗಾಳಿಯಿಂದ ಕಾಂಪೌಂಡ್ ಗೋಡೆ ಬಿದ್ದು, ಸೈಕಲ್ ಸ್ಟಾೃಂಡ್ ಛಾವಣಿ ಹಾರಿಹೋಗಿದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗಮಂದಿರ ಅವಶ್ಯವಿದೆ. ಶೌಚಗೃಹಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಗವಟೂರು ಶಾಲೆ ವಿದ್ಯಾರ್ಥಿಗಳು ಮನವಿ ಮಾಡಿದರು. ಶಾಲೆ ಕಟ್ಟಡ, ಅಡುಗೆ ಕೋಣೆ ಶಿಥಿಲವಾಗಿದೆ. ನಮಗೂ ಸ್ಮಾರ್ಟ್‌ಕ್ಲಾಸ್ ಬೇಕು. ಶಾಲಾ ಆವರಣದ ದಾರಿಗೆ ಲಾಕಿಂಗ್ ಟೈಲ್ಸ್ ಅಳವಡಿಸಿ ಎಂದು ಬರುವೆ ಶಾಲೆ ಮಕ್ಕಳು ಬೇಡಿಕೆ ಇಟ್ಟರು.
200 ಮಕ್ಕಳಿಗೆ ಕೈತೊಳೆಯಲು ಕೇವಲ ಮೂರು ನಲ್ಲಿಗಳಿವೆ ಸಾಕಾಗುತ್ತಿಲ್ಲ. ಹೆಚ್ಚುವರಿ ವಾಟರ್ ಟ್ಯಾಂಕ್ ಬೇಕಿದೆ ಎಂದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಗಮನಸೆಳೆದರು. ಶಾಲೆಯ ತ್ಯಾಜ್ಯ ಸಂಗ್ರಹಕ್ಕೆ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಶಾಲೆಗೆ ಹೋಗುವ ರಸ್ತೆ ಹಾಳಾಗಿದೆ ಎಂದು ರಾಮಕೃಷ್ಣ ವಿದ್ಯಾಲಯದ ಮಕ್ಕಳು ದೂರಿದರು.
ಸ್ವಚ್ಛತಾ ಕಾರ್ಯ ಭರವಸೆ: ಮಕ್ಕಳಲ್ಲಿ ಜಾಗೃತಿ ಹಾಗೂ ಪ್ರಶ್ನೆ ಮಾಡುವ ಭಾವನೆ ಬೆಳೆಯಲು ಸೂಕ್ತ ವೇದಿಕೆಯಾದ ಈ ಗ್ರಾಮಸಭೆಯಲ್ಲಿ ಉತ್ತಮವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ ಎಂದು ಪಿಡಿಒ ನಾಗರಾಜ್ ಪ್ರಶಂಸೆ ವ್ಯಕ್ತಪಡಿಸಿದರು. ಸ್ವಚ್ಛತೆ ಇನ್ನಿತರ ಕಾರ್ಯಗಳನ್ನು ಪಂಚಾಯಿತಿ ನಿರ್ವಹಿಸುತ್ತದೆ. ಉಳಿದಂತೆ ಕಟ್ಟಡ, ಆಡಿಟೋರಿಯಂ ಕಾಂಪೌಂಡ್ ನಿರ್ಮಾಣ ಮತ್ತಿತರ ದೊಡ್ಡ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಕಾಮಗಾರಿಗೆ ಶಾಸಕರಿಂದ ಅನುದಾನ ಮಂಜೂರಾಗಿದೆ ಎಂದರು.
ವಿದ್ಯಾರ್ಥಿ ಅರುಣ್ ಸಭಾಧ್ಯಕ್ಷರಾಗಿ ಹಾಗು ದಿಶಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರು, ವಿವಿಧಶಾಲೆ ಮಕ್ಕಳು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net