ಹಬ್ಬದಾಚರಣೆ ವೇಳೆ ಗೊಂದಲ ಸಲ್ಲ | Cordial Meeting

ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಎಸ್ಪಿ ಬಿ.ನಿಖಿಲ್ ಮಾತನಾಡಿದರು. ಕದಿರೇಶ್, ದೇವರಾಜ್, ಪ್ರಕಾಶ್ ರಾಥೋಡ್, ನಾಗಮ್ಮ ಇತರರಿದ್ದರು.
ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಎಸ್ಪಿ ಬಿ.ನಿಖಿಲ್ ಮಾತನಾಡಿದರು. ಕದಿರೇಶ್, ದೇವರಾಜ್, ಪ್ರಕಾಶ್ ರಾಥೋಡ್, ನಾಗಮ್ಮ ಇತರರಿದ್ದರು.
Published on
ಭದ್ರಾವತಿ: ಗೌರಿ-ಗಣೇಶ ಹಬ್ಬವನ್ನು ಹೀಗೆಯೇ ಆಚರಿಸಬೇಕೆಂಬ ಯಾವುದೇ ನಿರ್ಬಂಧವಿಲ್ಲ. ಆದರೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಆಚರಿಸಿ ಎಂದು ಎಸ್ಪಿ ಬಿ.ನಿಖಿಲ್ ಹೇಳಿದರು.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿದರು. ಭದ್ರಾವತಿ ತಾಲೂಕಿನಲ್ಲಿ ಯುವಕರ ಸಂಖ್ಯೆ ಹೆಚ್ಚು. ಇಲ್ಲಿನ ಯುವಕರಿಗೆ ಸಂಘಟನೆ ಮುಖಂಡರು ತಿಳಿವಳಿಕೆ ನೀಡಬೇಕು. ಕಿಡಿಗೇಡಿಗಳು ಎಲ್ಲೆಡೆ ಇರುತ್ತಾರೆ. ಅವರನ್ನು ನಿಯಂತ್ರಣದಲ್ಲಿ ಇಡುವುದು ಸೂಕ್ತ. ನಾವು ಹೇಳುವುದು ಆದೇಶವಾಗುತ್ತದೆ. ಸಮಿತಿ ಮುಖಂಡರು ಹೇಳಿದರೆ ಉಪದೇಶವಾಗುತ್ತದೆ. ನಮ್ಮೊಂದಿಗೆ ಸೇರಿ ದೇಶ ಕಟ್ಟಬೇಕಾದ ಯುವಕರು ಸಂಪರ್ಕ ಬೆಳೆಸಿಕೊಳ್ಳಬೇಕು ಎಂದರು.
ಪೌರಾಯುಕ್ತ ಕೆ.ಎನ್.ಹೇಮಂತ್ ಮಾತನಾಡಿ, ಗಣಪತಿ ಪ್ರತಿಷ್ಠಾಪನೆಗೆ ಇಲಾಖೆಗಳಿಂದ ಪರವಾನಗಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ನಗರದೆಲ್ಲೆಡೆ ಕಟ್ಟಿದ ಬಂಟಿಂಗ್ಸ್, ಪ್ಲೆಕ್ಸ್‌ಗಳನ್ನು ವಿಸರ್ಜನಾ ನಂತರ ಶೀಘ್ರ ತೆರವುಗೊಳಿಸಬೇಕು ಎಂದು ತಿಳಿಸಿದರು.
ಹಿಂದೂ ಮಹಾಸಭಾ- ಹಿಂದೂ ರಾಷ್ಟ್ರಸೇನಾ ಮುಖಂಡ ಕದಿರೇಶ್ ಮಾತನಾಡಿ, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯನ್ನು ಶಾಂತಿಯುತವಾಗಿ ಆಚರಿಸಲಾಗುವುದು. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತೇವೆ. ಪೊಲೀಸ್ ಇಲಾಖೆ ಸಹ ಅನಗತ್ಯ ತೊಂದರೆ ನೀಡಬಾರದು ಎಂದು ಮನವಿ ಮಾಡಿದರು.
ಡಿವೈಎಸ್ಪಿ ಪ್ರಕಾಶ್ ರಾಥೋಡ್, ನಗರ ಸಿಪಿಐ ನಾಗಮ್ಮ, ಗ್ರಾಮಾಂತರ ಸಿಪಿಐ ಚಿದಾನಂದ್, ಹೊಳೆಹೊನ್ನೂರು ಪಿಐ ಶಿವಪ್ರಸಾದ್, ಗ್ರೇಡ್-2 ತಹಸೀಲ್ದಾರ್ ಸುರೇಶ್, ಅರಣ್ಯ ಇಲಾಖೆ ಅಧಿಕಾರಿ ರಾಜೇಶ್, ವಿನಾಯಕ್, ಆರ್.ಕರುಣಾಮೂರ್ತಿ, ಲತಾ ಚಂದ್ರಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net