ಕಾಗೋಡು ಚಳವಳಿಯಿಂದ ಹೊಸ ಕ್ರಾಂತಿ | Kagodu Movement Memory
ಸಾಗರ ಸಮೀಪದ ಮರತ್ತೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾಗೋಡು ಚಳವಳಿ ನೆನಪು ಕಾರ್ಯಕ್ರಮವನ್ನು ಚೀಲಕ್ಕೆ ಧಾನ್ಯ ಸುರಿಯುವ ಮೂಲಕ ಉದ್ಘಾಟಿಸಲಾಯಿತು. ಕಾಗೋಡು ತಿಮ್ಮಪ್ಪ, ಎನ್.ಶಿವಾನಂದ್ ಕುಗ್ವೆ, ಪ್ರೊ. ರಾಚಪ್ಪ, ಮಂಜಪ್ಪ ಎಂ.ಬಿ.ಹೊಯ್ಸಳ, ನಾಗರಾಜ್ ಆಲಳ್ಳಿ ಇತರರಿದ್ದರು.
ಸಾಗರ: ಉಳುವವನೇ ಹೊಲದ ಒಡೆಯ ಎಂಬ ಕಾನೂನು ಜಾರಿಯಾಗಲು ಕಾಗೋಡು ಭೂಮಿ ಹಕ್ಕಿನ ಅಹಿಂಸಾತ್ಮಕ ಹೋರಾಟ ರಾಜ್ಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿತು. ಅದಕ್ಕೊಂದು ಅರ್ಥಪೂರ್ಣ ಶಾಸನ ರಚಿಸಲಾಯಿತು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಮರತ್ತೂರು ಗ್ರಾಮದಲ್ಲಿ ಕಾಗೋಡು ಭೂಮಿ ಹಕ್ಕಿನ ಹೋರಾಟಗಾರ ದಿ. ಡಿ.ಮೂಕಪ್ಪ ಅವರ ಸ್ಮರಣಾರ್ಥ ಕಾಗೋಡು ಚಳವಳಿ-75 ಅಭಿಯಾನದ ಭಾಗವಾಗಿ ರೈತ, ದಲಿತ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಗ್ರಾಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಗೋಡು ಚಳವಳಿ ಯಶಸ್ಸು ಕಾಣಲೂ ಮರತ್ತೂರಿನ ಧೀರ ರೈತ ಹೋರಾಟಗಾರರು ಬಹುಮುಖ್ಯ ಕಾರಣ. ಭೂ ಹಕ್ಕು ಕಾಯ್ದೆ ಜಾರಿಯಾಗದಂತೆ ಅಂದಿನ ಭೂ ಮಾಲೀಕರು ಸಂಚು ಮಾಡಿದ್ದರು. ಚಳವಳಿಗಳು ಮೂಲ ಆಶಯವನ್ನು ಸಮರ್ಥವಾಗಿ ಕಂಡುಕೊಳ್ಳಬೇಕು. ತಾರ್ಕಿಕ ಅಂತ್ಯ ಕಂಡುಕೊಳ್ಳುವ ಚಿಂತನೆ ಬಹಳ ಮುಖ್ಯ ಎಂದರು.
ಕಾಗೋಡು ಚಳವಳಿಯಿಂದ ಆದ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ಕುರಿತು ಮಾತನಾಡಿದ ಪ್ರೊ. ಬಿ.ರಾಚಪ್ಪ, ಗೇಣಿ ರೈತರ ಬದುಕಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬಲ ನೀಡಿದ್ದು ಕಾಗೋಡು ಚಳವಳಿ. ಅಲ್ಲದೆ ಜೀತ ಪದ್ಧತಿಯನ್ನು ಕಡಿಮೆ ಮಾಡಿತು. ಕೆಲವು ಕಟ್ಟಳೆಗಳನ್ನು ಮುರಿದು ಗಣಪತಿಯಪ್ಪ, ಮೂಕಪ್ಪ ಅವರಂತಹ ನಾಯಕರು ಚಳವಳಿ ರೂಪಿಸಿದ್ದು ಚಾರಿತ್ರಿಕ ಸಂಗತಿ ಎಂದು ಅಭಿಪ್ರಾಯಪಟ್ಟರು.
ಅಂದು ಭೂ ಮಾಲೀಕರು ಮಾಡುತ್ತಿದ್ದ ಶೋಷಣೆಯ ಸ್ವರೂಪ ಬದಲಾಗಿದೆ. ಈಗ ಕಾರ್ಪೋರೆಟ್ ಮತ್ತು ಸಾಮ್ರಾಜ್ಯಶಾಹಿ ರೂಪದಲ್ಲಿ ಶೋಷಣೆಗೆ ಮುಂದಾಗಿದೆ. ಇದರಿಂದ ರೈತ ತನ್ನ ಭೂಮಿ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಹೀಗಾಗಿ ಕಾಗೋಡು ಚಳವಳಿಯಂತಹ ಆಂದೋಲನ ನಿತ್ಯ ನಿರಂತರವಾಗಿರಬೇಕು. ನಮ್ಮ ಯುವಜನರು ತಲೆಮಾರು ವಿರೋಚಿತ ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಶಿವಾನಂದ್ ಕುಗ್ವೆ, ರೈತ ಮುಖಂಡರಾದ ಮಂಜಪ್ಪ ಎಂ.ಬಿ.ಹೊಯ್ಸಳ, ಮಂಜಪ್ಪ, ಸಮಿತಿ ಅಧ್ಯಕ್ಷ ನಾಗರಾಜ್ ಆಲಳ್ಳಿ, ವಕೀಲ ರಮೇಶ್ ಮರತ್ತೂರು, ರೈತ ದಲಿತ ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಚ್.ಬಿ.ರಾಘವೇಂದ್ರ ಇತರರಿದ್ದರು.