ನೂತನ ಪಿಂಚಣಿ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೊರಬದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕಲ್ಲಪ್ಪ, ಬಿ.ವಿ.ಜಾವೂರ್, ಬಂಗಾರಪ್ಪ ಜಡೇಕರ್, ಮೋಹನದಾಸ್, ಶಿವಾನಂದಪ್ಪ, ವಿಜಯಲಕ್ಷ್ಮೀ, ಶಶಿಕಲಾ ಇತರರಿದ್ದರು.
ಸೊರಬ: ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸಿರುವುದನ್ನು ಖಂಡಿಸಿ ನಿವೃತ್ತ ಸರ್ಕಾರಿ ನೌಕರರ ತಾಲೂಕು ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ವೇತನ ಪರಿಷ್ಕರಣೆ ನಿವೃತ್ತ ನೌಕರರಿಗೆ ಅನ್ವಯವಾಗದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದು ನಿವೃತ್ತ ನೌಕರರಿಗೆ ಮರಣ ಶಾಸನ ಬರೆದಂತಿದೆ. ದೈಹಿಕ ಹಾಗೂ ಮಾನಸಿಕವಾಗಿ ಬಳಲಿರುವ ನಿವೃತ್ತಿ ನೌಕರರ ಬದುಕಿನಲ್ಲಿ ಏರುಪೇರಾಗುವ ಜತೆಗೆ ಅವರ ಆರ್ಥಿಕ ಶಕ್ತಿ ಕುಂದಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಈ ಅವೈಜ್ಞಾನಿಕ ನೀತಿಯಿಂದ ನಮ್ಮ ಬದುಕು ಮೂರಾಬಟ್ಟೆಯಾಗಲಿದೆ. ಇಳಿ ವಯಸ್ಸಿನಲ್ಲಿ ಕಾಯಿಲೆಗಳು ಎದುರಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎನ್ನುವ ನೂತನ ಕಾಯ್ದೆಯಿಂದ ಕಾಲಕಾಲಕ್ಕೆ ಜಾರಿಯಾಗುವ ವೇತನ ಪರಿಷ್ಕರಣೆಗೆ ನಿವೃತ್ತ ನೌಕರರಿಗೆ ವೇತನ ಹೆಚ್ಚಳ ಅನ್ವಯ ಆಗುವುದಿಲ್ಲ. ಇದರಿಂದ ನಮ್ಮ ಆರ್ಥಿಕ ಮಟ್ಟ ಕುಸಿಯಲಿದೆ. ಹಾಗಾಗಿ ಕೇಂದ್ರ ಸರ್ಕಾರ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತಾಲೂಕು ಆಡಳಿತದಿಂದ ಆಚರಿಸುವ ರಾಷ್ಟ್ರೀಯ ಹಬ್ಬಗಳಿಗೆ ಹಾಗೂ ದಾರ್ಶನಿಕರ ಜಯಂತ್ಯುತ್ಸವಕ್ಕೆ ನಿವೃತ್ತ ನೌಕರರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.