ಇ-ಹಾಜರಾತಿಗೆ ನೆಟ್‌ವರ್ಕ್ ಕಂಟಕ I e-attendence

ಶಿಕ್ಷಕರು ಹಾಜರಾತಿ ಹಾಕುತ್ತಿರುವ ಸಾಂದರ್ಭಿಕ ಚಿತ್ರ.
ಶಿಕ್ಷಕರು ಹಾಜರಾತಿ ಹಾಕುತ್ತಿರುವ ಸಾಂದರ್ಭಿಕ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರಿಗೆ ಕ್ಯಾಮ್ಸ್ ಕಿರಿಕಿರಿ
  • ಸಿಗ್ನಲ್ ಸಿಗದ ಕಾರಣ ಸಮಸ್ಯೆ
  • ಇನ್ನೂ ನೋಂದಣಿ ಮಾಡಿಕೊಂಡಿಲ್ಲ ಹಲವು ಅಧ್ಯಾಪಕರು
ಅರವಿಂದ ಅಕ್ಲಾಪುರ ಶಿವಮೊಗ್ಗ
ಶಿಕ್ಷಣ (education) ಇಲಾಖೆ ಇದೇ ಶೈಕ್ಷಣಿಕ ವರ್ಷದಿಂದ ಶಿಕ್ಷಕರ ಹಾಜರಾತಿ (attendence) ಗೆ ಕೆಎಎಂಎಸ್ (ಕರ್ನಾಟಕ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಜಾರಿಗೆ ತಂದಿದೆ. ಆದರೆ ಹೊಸ ವ್ಯವಸ್ಥೆಯಿಂದ ಅನೇಕ ಶಿಕ್ಷಕರು (teachers) ಕಿರಿಕಿರಿ ಅನುಭವಿಸಿದ್ದಾರೆ.!
ಸೋಮವಾರದಿಂದ ಸರ್ಕಾರಿ ಶಾಲೆಗಳು ಆರಂಭವಾಗಿವೆ. ಈ ಸಾಲಿನಿಂದ ಕರ್ನಾಟಕದ ಹಾಜರಾತಿ ನಿರ್ವಹಣಾ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಶಿಕ್ಷಕರು ಹರಸಾಹಸಪಟ್ಟರು.
ಎಲ್ಲ ಕಡೆ ತಂತ್ರಜ್ಞಾನ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸಹ ಮೊಬೈಲ್, ಆ್ಯಪ್, ಎಐ ಆಧಾರಿತ ವ್ಯವಸ್ಥೆ ಬಳಸಿಕೊಂಡು ಬಯೋಮೆಟ್ರಿಕ್ ಹಾಜರಾತಿ ಪಡೆಯಲು ನಿರ್ಧರಿಸಿದೆ. 2025ರ ಬಜೆಟ್‌ನಲ್ಲೇ ಈ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಘೋಷಣೆಯಾದ ಒಂದು ಶೈಕ್ಷಣಿಕ ವರ್ಷದ ಬಳಿಕ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಶಾಲೆಗಳಲ್ಲಿ ಶಿಕ್ಷಕರು ಕ್ಯಾಮ್ಸ್ ಮೂಲಕ ಹಾಜರಾತಿ ಹಾಕಲು ಪರದಾಡಿದರು. ಈಗಾಗಲೇ ಇಲಾಖೆ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಬಹಳಷ್ಟು ದೂರುಗಳೂ ಸಲ್ಲಿಕೆಯಾಗಿವೆ. ಆದರೆ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿಸಿಗುವ ಲಕ್ಷಣ ಸದ್ಯಕ್ಕಿಲ್ಲ.

ಅಕ್ರಮ ತಡೆಯಲು ಸಹಕಾರಿ

ಈಗಿರುವ ಆಫ್‌ಲೈನ್ ವ್ಯವಸ್ಥೆಯಲ್ಲಿ ಕೆಲವು ಶಿಕ್ಷಕರು ಶಾಲೆಗೆ ಬಂದು ಸಹಿ ಹಾಕಿ ಸ್ವಂತ ಕೆಲಸಕ್ಕೆಂದು ತೆರಳುವ ಅಥವಾ ತಡವಾಗಿ ಬಂದು ಸಹಿ ಹಾಕುವ ಬುದ್ಧಿವಂತಿಕೆ ಅನೇಕರಲ್ಲಿದೆ. ಕೆಲವು ಶಿಕ್ಷಕರು ಶಾಲೆಗೆ ಗೈರಾಗಿ ಮರುದಿನ ಬಂದು ಹಿಂದಿನ ದಿನದ ಹಾಜರಾತಿಗೆ ಸಹಿ ಹಾಕುವ ಪರಿಪಾಠವೂ ಇದೆ. ಇಂತಹ ಅಕ್ರಮ ತಡೆಯಲು ಕ್ಯಾಮ್ಸ್ ಸಹಕಾರಿಯಾಗಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ವ್ಯವಸ್ಥೆ ಶೇ.100 ಅನುಷ್ಠಾನಗೊಳ್ಳುವ ಬಗ್ಗೆ ಮೊದಲ ದಿನವೇ ಅನುಮಾನ ವ್ಯಕ್ತವಾಗುತ್ತಿದೆ.
ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೇ ಸರ್ಕಾರದ ಪ್ರಯತ್ನಕ್ಕೆ ತೊಡಕಾಗಿ ಪರಿಣಮಿಸುವ ಅಪಾಯವಿದೆ. ನಿರೀಕ್ಷೆಗೂ ಮೀರಿ ಟವರ್‌ಗಳು ನಿರ್ಮಾಣವಾಗಿದ್ದರೂ ಅವುಗಳ ತರಂಗಾಂತರ ವ್ಯಾಪ್ತಿ ಕಡಿಮೆ ಇರುವುದರಿಂದ ನೆಟ್‌ವರ್ಕ್ ವಿಷಯದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದು ಇ-ಹಾಜರಾತಿಗೂ ಸಮಸ್ಯೆಯಾಗಲಿದೆ.

ಮೂರು ತಾಲೂಕಿನಲ್ಲಿ ಸಮಸ್ಯೆ

ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನ ಬಹುತೇಕ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳು ಗ್ರಾಮಾಂತರ ಪ್ರದೇಶದಲ್ಲಿ ಇರುವುದರಿಂದ ನೆಟ್‌ವರ್ಕ್ ತೊಂದರೆ ಎದುರಾಗಿದೆ. ಪಿಯು ಕಾಲೇಜುಗಳಿರುವ ಪ್ರದೇಶಗಳು ಬಹುತೇಕ ನೆಟ್‌ವರ್ಕ್ ವ್ಯಾಪ್ತಿಯಲ್ಲೇ ಇರುವುದರಿಂದ ಅಷ್ಟೊಂದು ಸಮಸ್ಯೆಯಾಗಿಲ್ಲ. ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಒಎಫ್‌ಸಿ ಕೇಬಲ್ ಅಳವಡಿಸಿ ನೆಟ್‌ವರ್ಕ್ ಒದಗಿಸುವ ಪ್ರಯತ್ನ ನಡೆದಿದೆ. ಆದರೆ ಒಎಫ್‌ಸಿ ನಿರ್ವಹಣೆ ಸಮರ್ಪಕವಾಗಿರದ ಕಾರಣ ಇದು ಹೆಚ್ಚು ಉಪಯುಕ್ತವಾಗುತ್ತಿಲ್ಲ.

ಹೀಗಿರಲಿದೆ ಕ್ಯಾಮ್ಸ್

ಸರ್ಕಾರಿ, ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕ್ಯಾಮ್ಸ್ ವ್ಯವಸ್ಥೆ ಅನ್ವಯವಾಗಲಿದೆ. ಕ್ಯಾಮ್ಸ್‌ನಿಂದ ಅಭಿವೃದ್ಧಿಪಡಿಸಲಾದ ಆ್ಯಪ್‌ನ್ನು ಶಿಕ್ಷಕರು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶಿಕ್ಷಕರು ಶಾಲಾ ವ್ಯಾಪ್ತಿಗೆ ಬಂದ ಕೂಡಲೇ ಆ್ಯಪ್‌ನಲ್ಲಿ ಅದು ದಾಖಲಾಗುತ್ತದೆ. ಶಿಕ್ಷಕರು ಶಾಲೆಯಲ್ಲಿ ಇಲ್ಲ ಎಂದಾದರೆ ಅದನ್ನೂ ಆ್ಯಪ್ ಮೂಲಕ ತಿಳಿಯಬಹುದು.

ಇನ್ನೂ ಹಲವರು ನೋಂದಣಿಯಾಗಿಲ್ಲ

ಕ್ಯಾಮ್ಸ್ ವ್ಯವಸ್ಥೆಗೆ ಜಿಲ್ಲೆಯಲ್ಲಿ ಇನ್ನೂ ಅನೇಕರು ನೋಂದಣಿ ಮಾಡಿಕೊಂಡಿಲ್ಲ. ಹೀಗೆ ನೋಂದಣಿ ಮಾಡಿಕೊಳ್ಳದ ಶಿಕ್ಷಕರ ಮಾಹಿತಿಯನ್ನು ಇಲಾಖೆ ಕೋರಿದೆ. ಶಿಕ್ಷಕರು ತಾವು ಕಾರ್ಯನಿರ್ವಹಿಸುವ ಶಾಲೆಯಲ್ಲಿ ಬೆಳಗ್ಗೆ 9.45ಕ್ಕೆ ಹಾಜರಿದ್ದು ಆನ್‌ಲೈನ್ ಮೂಲಕ ಉಪಸ್ಥಿತಿ ದಾಖಲಿಸಬೇಕು. ಸಂಜೆ 4.30ಕ್ಕೆ ಮತ್ತೊಮ್ಮೆ ಹಾಜರಾತಿ ಹಾಕಿ ಶಾಲೆಯಿಂದ ನಿರ್ಗಮಿಸಬೇಕು. ಹೀಗಾಗಿ ತ್ವರಿತವಾಗಿ ಎಲ್ಲ ಶಿಕ್ಷಕರೂ ನೋಂದಣಿ ಮಾಡಿಕೊಳ್ಳುವಂತೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಸಂಬಳಕ್ಕೂ ಕುತ್ತು
ಇಷ್ಟು ದಿನ ಬಹುತೇಕ ಶಿಕ್ಷಕರು 5-10 ನಿಮಿಷ ತಡವಾಗಿ ಶಾಲೆಗೆ ಆಗಮಿಸುತ್ತಿದ್ದರು. ತಾಲೂಕು, ಜಿಲ್ಲಾ ಕೇಂದ್ರಗಳಿಂದ ಪ್ರತಿ ದಿನ ಶಾಲೆಗೆ ಓಡಾಡುವವರ ಸಂಖ್ಯೆ ಹೆಚ್ಚಿದೆ. ಇವರೆಲ್ಲ ನಿಗದಿತ ಸಮಯಕ್ಕೆ ಪ್ರತಿ ದಿನ ಹಾಜರಾಗುವುದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗಕ್ಕೆ ಬಸ್ ಸೌಕರ್ಯವೂ ಕಡಿಮೆ ಆಗಿರುವುದರಿಂದ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದು, 4.30ರವರೆಗೂ ಶಾಲೆಯಲ್ಲಿ ಇರುವುದು ಸಾಧ್ಯವಾಗುತ್ತಿರಲಿಲ್ಲ. ಕೆಲವರಂತೂ ಬಸ್‌ಗಳ ಸಮಯಕ್ಕೆ ಸರಿಯಾಗಿ ಶಾಲೆಯ ಸಮಯವನ್ನೇ ಬದಲಾಯಿಸಿಕೊಂಡಿದ್ದರು. ಆದರೆ ಈಗ ಕ್ಯಾಮ್ಸ್ ವ್ಯವಸ್ಥೆಯಲ್ಲಿ ಹಾಕುವ ಹಾಜರಾತಿ ನೇರವಾಗಿ ಎಚ್‌ಆರ್‌ಎಂಎಸ್‌ಗೆ ಲಿಂಕ್ ಆಗುತ್ತದೆ. ಇದನ್ನು ಆಧರಿಸಿಯೇ ವೇತನ ಮತ್ತಿತರ ಸೌಲಭ್ಯಗಳು ಶಿಕ್ಷಕರಿಗೆ ದೊರೆಯಲಿವೆ. ಸಮಯಕ್ಕೆ ಸರಿಯಾಗಿ ಹಾಜರಾತಿ ಹಾಕದ ಶಿಕ್ಷಕರನ್ನು ಗೈರು ಎಂದೇ ಪರಿಗಣಿಸಲಾಗುತ್ತದೆ. ಇದರಿಂದ ಸಂಬಳಕ್ಕೂ ಕುತ್ತು ಬರಲಿದೆ.
ಶಿಕ್ಷಕರ ಆತಂಕಗಳಿವು
ಶಾಲೆ ಆವರಣದ 100 ಮೀ. ಅಂತರದಲ್ಲಿ ಮಾತ್ರ ಹಾಜರಾತಿ ನೋಂದಣಿ ಜಿಪಿಎಸ್ ಸೌಲಭ್ಯ ಇರಲಿದೆ. ಅಲ್ಲದೆ ಶಿಕ್ಷಕರು ಎಲ್ಲಿಂದ ಹಾಜರಾತಿ ಹಾಕಿದ್ದಾರೆ ಎಂಬುದು ತಿಳಿಯಲಿದೆ. ಶಿಕ್ಷಕರು ತಡವಾಗಿ ಬಂದಲ್ಲಿ ಅಥವಾ ಶಾಲಾ ಅವಧಿ ಮುಗಿಯುವ ಮುನ್ನವೇ ತೆರಳಿದರೆ ಗೈರು ಎಂದು ನಮೂದಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇರುವುದಿಲ್ಲ. ನೆಟ್‌ವರ್ಕ್ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಲಾಗಿನ್ ಆಗುವುದು ಹೇಗೆ? ಇದರಿಂದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದರೂ ಗೈರು ತೋರಿಸುವ ಸಾಧ್ಯತೆ ಇದೆ. ಇಂತಹ ತಾಂತ್ರಿಕ ತೊಂದರೆ ನಿವಾರಣೆಗೆ ಆದ್ಯತೆ ನೀಡಬೇಕು ಎಂದು ಶಿಕ್ಷಕರೊಬ್ಬರು ಆಗ್ರಹಿಸಿದ್ದಾರೆ. ಒಂದು ವೇಳೆ ಮೊಬೈಲ್ ಮನೆಯಲ್ಲಿ ಮರೆತು ಶಾಲೆಗೆ ತೆರಳಿದರೆ ಅಥವಾ ಶಾಲೆಗೆ ಬರುವಾಗ ಮೊಬೈಲ್ ಕಳುವಾದರೆ ಇಲ್ಲವೇ ಮೊಬೈಲ್ ಹಾಳಾದರೆ ಮಾಡುವುದೇನು ಎಂಬುದು ಶಿಕ್ಷಕರ ಆತಂಕದ ಪ್ರಶ್ನೆಗಳು.
"

ಮೊದಲ ದಿನ ಕ್ಯಾಮ್ಸ್ ವ್ಯವಸ್ಥೆ ಸ್ವಲ್ಪ ಸಮಸ್ಯೆ ಉಂಟು ಮಾಡಿದೆ. ಎಲ್ಲರೂ ಏಕಕಾಲಕ್ಕೆ 9.45ಕ್ಕೆ ಹಾಜರಾಗಿ ಹಾಕಲು ಮುಂದಾಗುವುದರಿಂದ ಸರ್ವರ್ ಸಮಸ್ಯೆ ಕಾಡಿದೆ. ಕೆಲವು ಕಡೆಗಳಲ್ಲಿ ನೆಟ್‌ವರ್ಕ್ ತೊಂದರೆಯೂ ಉಂಟಾಗಿದೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೊಸ ವ್ಯವಸ್ಥೆ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

— ರಮೇಶ್, ಬಿಇಒ, ಶಿವಮೊಗ್ಗ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net