ಅಶಕ್ತರ ದನಿಯಾಗಿದ್ದ ನಾರಾಯಣ ಗುರು | Narayana Guru Jayanti

ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಶ್ರೀ ರೇಣುಕಾನಂದ ಸ್ವಾಮೀಜಿ ಉದ್ಘಾಟಿಸಿದರು. ಸೋಮಶೇಖರ, ಚಂದ್ರಕುಮಾರ, ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ ಇತರರಿದ್ದರು.
ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಶ್ರೀ ರೇಣುಕಾನಂದ ಸ್ವಾಮೀಜಿ ಉದ್ಘಾಟಿಸಿದರು. ಸೋಮಶೇಖರ, ಚಂದ್ರಕುಮಾರ, ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ ಇತರರಿದ್ದರು.
Published on
ರಿಪ್ಪನ್‌ಪೇಟೆ: ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿದ್ದಾಗ ಶೋಷಿತರ ಬದುಕಿಗೆ ಬೆಳಕಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ನಿಟ್ಟೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಆವರಣದಲ್ಲಿ ಶ್ರೀ ನಾರಾಯಣ ಮಿಷನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಹಾಗೂ ಓಣಂ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿದ್ದ ಅಮಾನವೀಯ ಆಚರಣೆಗಳನ್ನು ತೊಡೆದುಹಾಕಲು ಸಂಕಲ್ಪ ಮಾಡಿದ ಗುರುಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದರು. ಮನುಷ್ಯರಲ್ಲಿ ಸಂಘರ್ಷವನ್ನು ಒಪ್ಪದ ನಾರಾಯಣ ಗುರುಗಳು ಸೌಹಾರ್ದದಲ್ಲಿಯೇ ಸಮಾಧಾನವಿದೆ ಎಂಬುದನ್ನು ಕಂಡುಕೊಂಡಿದ್ದರು. ಆದ್ದರಿಂದಲೇ ಪ್ರತಿಯೊಬ್ಬರೂ ಸುಶಿಕ್ಷಿತರಾಗಿ, ಸಂಘಟಿತರಾಗಿ ಎಂದು ಕರೆ ನೀಡಿದ್ದರು ಎಂದು ತಿಳಿಸಿದರು.
ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಂಬುದನ್ನು ಪ್ರತಿಪಾದಿಸಿದರು. ಗುರುಗಳ ಜ್ಞಾನ ಸಿದ್ಧಾಂತದ ಪರಿಣಾಮ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೇರಳ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ದೀಪಾವಳಿ, ಯುಗಾದಿ ಹಬ್ಬಗಳಿಗೆ ವಿಶೇಷ ಸ್ಥಾನಮಾನವಿದ್ದಂತೆ, ಕೇರಳದಲ್ಲಿ ಓಣಂ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಮೂಲದವರು ನಮ್ಮಲ್ಲಿ ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹಬ್ಬಗಳಲ್ಲಿ ಸರ್ವರೂ ಪಾಲ್ಗೊಂಡು ಸಂಭ್ರಮಿಸಿ, ಸಾಮರಸ್ಯದ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
ಸಂಘದ ಅಧ್ಯಕ್ಷ ಸೋಮಶೇಖರ, ಚಂದ್ರಕುಮಾರ, ಮುಖಂಡರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಕುಂಜಟ್ಟ, ಎನ್.ಸತೀಶ, ಸುಧೀಂದ್ರ ಪೂಜಾರಿ, ಪಿ.ರಮೇಶ, ನಿರೂಪ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net