ಸಮಯಕ್ಕೆ ಸರಿಯಾಗಿ ಬಾರದ ನಾಡಕಚೇರಿ ಸಿಬ್ಬಂದಿ | Public outrage

ಸೋಮವಾರ ಬೆಳಗ್ಗೆ ತಡವಾಗಿ ನಾಡಕಚೇರಿ ಬಾಗಿಲು ತೆರೆಯುತ್ತಿರುವ ಹಂಗಾಮಿ ನೌಕರ.
ಸೋಮವಾರ ಬೆಳಗ್ಗೆ ತಡವಾಗಿ ನಾಡಕಚೇರಿ ಬಾಗಿಲು ತೆರೆಯುತ್ತಿರುವ ಹಂಗಾಮಿ ನೌಕರ.
Published on
ತುಮರಿ: ಇಲ್ಲಿನ ಸುಳ್ಳಳ್ಳಿಯ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್ ಮತ್ತು ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು ಎಂದು ಇತ್ತೀಚಿಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಸುಳ್ಳಳ್ಳಿ ಗ್ರಾಮದ ನಾಡಕಚೇರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಿರುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ಪ್ರತಿದಿನ ಬಂದು ಕಾದು, ಬೇಸತ್ತು ಮನೆಗೆ ವಾಪಸ್ ಹೋಗುವಂತಾಗಿದೆ.
ನಾಡಕಚೇರಿ ವ್ಯಾಪ್ತಿಯಲ್ಲಿ ಶಂಕಣ್ಣ ಶಾನುಭೋಗ, ತುಮರಿ, ಚೆನ್ನಗೊಂಡ ಹಾಗೂ ಕುದರೂರು ಎಂಬ ನಾಲ್ಕು ಗ್ರಾಪಂಗಳ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್, ಗುಮಾಸ್ತ ಹಾಗೂ ಅಟೆಂಡರ್ ಕಚೇರಿಯಲ್ಲಿ ಹಾಜರಿರಬೇಕು. ಆದರೆ ನಾಡಕಚೇರಿಯಲ್ಲಿ ಕೇವಲ ಮಾಹಿತಿ ನಿರ್ವಾಹಕ ಮಾತ್ರ ಇದ್ದು, ಉಳಿದ ಯಾವುದೇ ಸಿಬ್ಬಂದಿ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಯಾದರೂ ಯಾವ ಸಿಬ್ಬಂದಿಯೂ ಕಚೇರಿಗೆ ಬಂದಿರಲಿಲ್ಲ. ದೂರದ ಹಳ್ಳಿಗಳಿಂದ ಅಗತ್ಯ ದಾಖಲೆಗಳನ್ನು ಪಡೆಯಲು ವೃದ್ಧರು, ರೈತರು ಮತ್ತು ಮಹಿಳೆಯರು ಆಗಮಿಸಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕಚೇರಿ ಆರಂಭವಾಗುವ ಸಮಯ ಕಳೆದರೂ ಬಹುತೇಕ ಸಿಬ್ಬಂದಿಯ ಆಸನಗಳು ಖಾಲಿ ಇರುತ್ತವೆ. ಕಚೇರಿಗೆ ತಡವಾಗಿ ಬರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"

ಅಧಿಕಾರಿಗಳು ಕಚೇರಿಯಿಂದ ಹೊರಗೆ ಹೋಗುವುದಾದರೆ ನಾಡಕಚೇರಿಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಿ ಹೋಗಬೇಕು. ಸರ್ಕಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸಕಾಲಕ್ಕೆ ಸರಿಯಾಗಿ ನಾಡಕಚೇರಿಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು.

— ಪ್ರತಿಭಾ, ತಹಸೀಲ್ದಾರ್, ಸಾಗರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net