ಮುಪ್ಪಾನೆ ಲಾಂಚ್ ಜೂನ್ 2ರಿಂದ ಸ್ಥಗಿತ

ಕಾರ್ಗಲ್ ಸಮೀಪದ ಮುಪ್ಪಾನೆ ಲಾಂಚ್ ಸಂಚರಿಸುವ ಹಿನ್ನೀರು ಪ್ರದೇಶ.
ಕಾರ್ಗಲ್ ಸಮೀಪದ ಮುಪ್ಪಾನೆ ಲಾಂಚ್ ಸಂಚರಿಸುವ ಹಿನ್ನೀರು ಪ್ರದೇಶ.
Published on
ಕಾರ್ಗಲ್: ಮುಪ್ಪಾನೆ ಮತ್ತು ಹಲ್ಕೆ ನಡುವಿನ ಲಾಂಚ್ ಓಡಾಟ ಮಂಗಳವಾರದಿಂದ ಸ್ಥಗಿತಗೊಳ್ಳಲಿದೆ. ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಭಾರಂಗಿ ಹಾಗೂ ಕರೂರು ಹೋಬಳಿ ಸಂಪರ್ಕ ಸೇತುವಾದ ಲಾಂಚ್ ಓಡಾಟ ಮಂಗಳವಾರದಿಂದ ( ಜೂನ್ 2 ) ಸ್ಥಗಿತವಾಗಲಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನೇದಿನೆ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಆಳದಲ್ಲಿನ ಮರದ ದಿಣ್ಣೆಗಳು ಲಾಂಚ್‌ಗೆ ತಗಲುವ ಅಪಾಯವಿದೆ. ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ಲಾಂಚ್ ಅಡಿ ಭಾಗ ನೆಲಕ್ಕೆ ತಾಗುವ ಸಮಸ್ಯೆ ಇರುವ ಕಾರಣದಿಂದ ಸಂಚಾರ ಸೋಮವಾರವೇ ಕೊನೆಯಾಗಲಿದೆ.
ಮುನ್ನೆಚ್ಚರಿಕೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗುವುದು. ನೀರಿನ ಮಟ್ಟ ಹೆಚ್ಚಾದ ನಂತರ ಲಾಂಚ್ ಸಂಚಾರ ಮತ್ತೆ ಆರಂಭಗೊಳ್ಳಲಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಾಲೂಕು ಅಧಿಕಾರಿ ಅಶೋಕ್ ತಿಳಿಸಿದ್ದಾರೆ.
ಕರೂರು ಮತ್ತು ಭಾರಂಗಿ ಹೋಬಳಿ ನಡುವೆ ಪ್ರತಿನಿತ್ಯ ಸಾಕಷ್ಟು ಜನರ ಓಡಾಟ ಇರುತ್ತದೆ. ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಮೆಸ್ಕಾಂ ಕಚೇರಿ ಹಾಗೂ ಗ್ಯಾಸ್ ಸಿಲಿಂಡರ್ ಪಡೆಯಲು ಅಗತ್ಯ ಕಾರಣಗಳಿಗೆ ಸಾಕಷ್ಟು ಜನರು ನಿತ್ಯ ಸಂಚರಿಸುತ್ತಾರೆ. ಸಾಗರದಿಂದ ಕೇಬಲ್ ಬ್ರಿಡ್ಜ್ ಮಾರ್ಗವಾಗಿ ಸಿಗಂದೂರಿಗೆ ತೆರಳಿ ನಂತರ ಜೋಗ ಜಲಪಾತಕ್ಕೆ ಆಗಮಿಸುವ, ಬಳೆ ಪದ್ಮಾವತಿ ಅಮ್ಮನ ಕ್ಷೇತ್ರದ ದರ್ಶನ ಮಾಡುವವರಿಗೆ ಈ ಮಾರ್ಗ ಅತ್ಯಂತ ಸೂಕ್ತವಾಗಿತ್ತು. ಶ್ರೀಕ್ಷೇತ್ರ ಕೊಲ್ಲೂರು ಹಾಗೂ ಕರಾವಳಿ ಸಂಪರ್ಕ ಮಾಡಲು ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸನಿಹವಾದ ಮಾರ್ಗವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net