ಗೋಮಾತೆಯೇ ನಿಜವಾದ ವಿಶ್ವಬಂಧು I vishwa bandhu

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಸಮೀಪ ವಿಶ್ವಬಂಧು ಗೋಶಾಲೆ ಹಾಗೂ ಸಾವಯವ ಕೃಷಿ ತರಬೇತಿ ಶಿಬಿರವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಉಮೇಶ್ ಆರಾಧ್ಯ ಇದ್ದರು.
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಸಮೀಪ ವಿಶ್ವಬಂಧು ಗೋಶಾಲೆ ಹಾಗೂ ಸಾವಯವ ಕೃಷಿ ತರಬೇತಿ ಶಿಬಿರವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಉಮೇಶ್ ಆರಾಧ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಅವಶ್ಯ
  • ಹಾಲಿನಲ್ಲಿದೆ ಔಷಧೀಯ ಗುಣ
  • ರಾಘವೇಶ್ವರ ಭಾರತೀ ಶ್ರೀಗಳ ಅಭಿಮತ
  • ಗೋವರ್ಧನ ಟ್ರಸ್ಟ್‌ನಿಂದ ಗೋಶಾಲೆ ಉದ್ಘಾಟನೆ
ಶಿವಮೊಗ್ಗ: ಗೋಮಾತೆ ಮಾತ್ರ ನಿಜವಾದ ಅರ್ಥದಲ್ಲಿ ವಿಶ್ವಬಂಧು. ಇದನ್ನು ಹೊರತುಪಡಿಸಿದರೆ ಬೇರೆ ಯಾರೂ ವಿಶ್ವಬಂಧುವಾಗಲು ಸಾಧ್ಯವಿಲ್ಲ. ಗೋವು (cow) ಹಾಲು (milk) ನೀಡುವಾಗ ಯಾವುದೇ ತಾರತಮ್ಯ ಮಾಡುವುದಿಲ್ಲ. ಗೋವುಗಳಿಗೆ ಭವಿಷ್ಯವಿಲ್ಲ ಎಂದಾದರೆ ವಿಶ್ವಕ್ಕೂ ಉಳಿಗಾಲವಿಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ (raghaveshwara) ಭಾರತೀ ಸ್ವಾಮೀಜಿ ಹೇಳಿದರು.
ಗೋವರ್ಧನ ಟ್ರಸ್ಟ್‌ನಿಂದ ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪ ನಿರ್ಮಾಣವಾಗಿರುವ ವಿಶ್ವಬಂಧು ಗೋಶಾಲೆಯನ್ನು ಶುಕ್ರವಾರ ಉದ್ಘಾಟಿಸಿ, ಸಾವಯವ ಕೃಷಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಈ ಶಾಲೆಗೆ ಗೋವುಗಳನ್ನು ಒದಗಿಸುವ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದರು.
ಈಗ ನಮ್ಮ ಗೋವರ್ಧನ ಗಿರಿಯಿಂದ 25 ಗೋವುಗಳನ್ನು ನೀಡಲಾಗಿದೆ. ಮುಂದೆ 250 ಗೋವುಗಳನ್ನು ಒದಗಿಸುವ ಅವಕಾಶ ಸಿಗುವಂತಾಗಲಿ. ಅರ್ಹರನ್ನು ಗುರುತಿಸಿ ಗೋವುಗಳನ್ನು ನೀಡುವುದು ಸವಾಲಿನ ಕೆಲಸ. ಏಕೆಂದರೆ ಗೋವುಗಳನ್ನು ಪಡೆದವರು ಅದನ್ನು ಕಸಾಯಿಖಾನೆಗೆ ನೀಡಿದರೆ ಅದರ ಪಾಪ ನಮಗೇ ತಗುಲುತ್ತದೆ ಎಂದು ಅಭಿಪ್ರಾಯಪಟ್ಟರು.
ಮಲೆನಾಡು ಗಿಡ್ಡ ಗೋವುಗಳು ಅತ್ಯಂತ ಉತ್ಕೃಷ್ಟವಾದವು. ಅವುಗಳ ನಿರ್ವಹಣೆ ವೆಚ್ಚ ಅತ್ಯಂತ ಕಡಿಮೆ. ಅಡುಗೆ ಮನೆಯಲ್ಲಿ ಉಳಿದ ಪದಾರ್ಥಗಳೇ ಅವುಗಳಿಗೆ ಸಾಕು. ಅದು ನೀಡುವ ಹಾಲು ವೈಜ್ಞಾನಿಕವಾಗಿ ಶ್ರೇಷ್ಠವಾಗಿದೆ. ಆ ಗೋವುಗಳ ಮೂತ್ರದಲ್ಲೂ ಔಷಧೀಯ ಅಂಶಗಳಿವೆ. ಆದರೆ ಅನೇಕರಿಗೆ ಮಲೆನಾಡು ಗಿಡ್ಡಗಳ ಮಹತ್ವವೇ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾವಯವ ಕೃಷಿ ಹಾಗೂ ಮಲೆನಾಡು ಗಿಡ್ಡಕ್ಕೆ ವ್ಯಾಪಕ ಸಂಬಂಧವಿದೆ. ಇಂದು ತರಕಾರಿ, ಹಣ್ಣು ಎಲ್ಲವೂ ಕಲುಷಿತವಾಗುತ್ತಿದೆ. ಸಾವಯವ ಕೃಷಿಯನ್ನು ಬೆಳೆಸುವ ದೃಷ್ಟಿಯಿಂದ ಮಲೆನಾಡು ಗಿಡ್ಡ ಸೇರಿ ಎಲ್ಲ ಗೋವುಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಗೋವರ್ಧನ ಟ್ರಸ್ಟ್‌ನಿಂದ ಗೋಸಂರಕ್ಷಣೆಗಾಗಿ ಪ್ರತಿ ಮನೆಯಿಂದ ಮಾಸಿಕ 100 ರೂ. ಸಂಗ್ರಹಿಸುತ್ತಿರುವ ಯೋಜನೆ ಅತ್ಯಂತ ಉತ್ತಮವಾಗಿದೆ. ಇದು ಯಾರಿಗೂ ಹೊರೆಯಾಗುವುದಿಲ್ಲ. ಇದು ಒಂದು ರೀತಿ ಜೇನು ಸಂಗ್ರಹಣೆಯಂತೆ. ಸಮಾಜವನ್ನೂ ಈ ಸೇವೆಯಲ್ಲಿ ಒಳಗೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ ಎಂದರು.
ಗೋವರ್ಧನ ಟ್ರಸ್ಟ್‌ನ ಮಹಾಪೋಷಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಟ್ರಸ್ಟ್‌ನ ಅಧ್ಯಕ್ಷ ಕೆ.ಇ.ಕಾಂತೇಶ್, ಸಾವಯವ ಕೃಷಿಕರ ಟ್ರಸ್ಟ್ ಅಧ್ಯಕ್ಷ ಜಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿ ಎಂ.ನಾಗೇಶ್, ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ಎಸ್.ಕೆ.ಶೇಷಾಚಲ ಇದ್ದರು.

ಗೋವರ್ಧನ ಕಾರ್ಯ ವಿವರಿಸಿದ ಕಾಂತೇಶ್

ಏಳು ತಿಂಗಳ ಹಿಂದೆ ಗೋವರ್ಧನ ಸಂಸ್ಥೆಯ ಕನಸು ಚಿಗುರೊಡೆಯಿತು. ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಕ್ಟೋಬರ್‌ನಲ್ಲಿ ಗೋವರ್ಧನ ಟ್ರಸ್ಟ್‌ಗೆ ಚಾಲನೆ ನೀಡಿ ಆಶೀರ್ವದಿಸಿದರು. ಸುರಭಿ, ಜ್ಞಾನೇಶ್ವರಿ ಹಾಗೂ ಮಹಾವೀರ ಗೋಶಾಲೆಗೆ ಮೇವು ಒದಗಿಸುವ ಪ್ರಯತ್ನವನ್ನು ಈ ಟ್ರಸ್ಟ್ ಮಾಡುತ್ತದೆ. ಚಟ್ನಳ್ಳಿಯ ರಮೇಶ್ ಎಂಬುವವರ ಜಮೀನನಲ್ಲಿ ಮೇವು ಬೆಳೆಯಲಾಗುತ್ತಿದೆ. ಈ ಕಾರ್ಯಕ್ಕೆ ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವದಿಸಿದ್ದರು. ಮೂರು ಗೋಶಾಲೆಗಳಿಗೆ ಇದುವರೆಗೆ 40ಕ್ಕೂ ಹೆಚ್ಚು ಲೋಡ್ ಮೇವು ಪೂರೈಕೆ ಮಾಡಲಾಗಿದೆ ಎಂದು ಕೆ.ಇ.ಕಾಂತೇಶ್ ಹೇಳಿದರು. ಬಿಡಾಡಿ ದನಗಳು ಹಾಗೂ ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ ಅವುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಒದಗಿಸಲಾಗಿದೆ. ನಮ್ಮ ಕಾರ್ಯಕ್ಕೆ ಶೃಂಗೇರಿ ಶಾರದಾ ಪೀಠದಿಂದ ಐದು ಲಕ್ಷ ರೂ., ಹೊಂಬುಜ ಕ್ಷೇತ್ರದಿಂದ ಎರಡು ಲಕ್ಷ ರೂ. ಹಾಗೂ ಎಡೆಯೂರು ಶ್ರೀಗಳು 50 ಸಾವಿರ ರೂ. ನೀಡಿ ಆಶೀರ್ವದಿಸಿದ್ದಾರೆ. ಐದು ಸಾವಿರ ಮನೆಗಳಿಗೆ ಗೋಸದಸ್ಯತ್ವ ನೀಡಲಾಗಿದೆ ಎಂದರು.
ಶ್ರೀಮಠಕ್ಕೆ ಅನುದಾನ ತರಲು ಪ್ರಯತ್ನ
ರಾಘವೇಶ್ವರ ಶ್ರೀಗಳು ಅಸಂಖ್ಯಾತ ಮಂದಿಗೆ ಗೋಸೇವೆಯ ಸಂಕಲ್ಪ ಮೂಡಿಸಿದವರು. ಸ್ವತಃ ಗೋಸಂರಕ್ಷಕರೂ ಆಗಿರುವ ಶ್ರೀಗಳು ಈ ಕಾರ್ಯದಲ್ಲಿ ಗಣನೀಯ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ‘ಪ್ರಸಾದ’ ಎಂಬ ಯೋಜನೆ ರೂಪಿಸಿದೆ. ಅಲ್ಲಿ ಕೋಟ್ಯಂತರ ರೂ. ಹಣವಿದೆ. ಗೋಸೇವೆ ಮಾಡುತ್ತಿರುವ ರಾಮಚಂದ್ರಾಪುರ ಮಠಕ್ಕೆ ಆ ಯೋಜನೆ ಮೂಲಕ ಅನುದಾನ ತರುವ ಪ್ರಯತ್ನ ಮಾಡಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ರಾಮಚಂದ್ರಾಪುರ ಮಠದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ಮಂದಿರ ನಿರ್ಮಾಣಕ್ಕೆ ಹಣ ತರುವ ಪ್ರಯತ್ನ ಮಾಡಲಾಗುವುದು ಎಂದರು.
"

ಈಶ್ವರಪ್ಪ ಅವರಿಗೆ ಏನು ಬೇಕಾದರೂ ಮಾಡುವ ಶಕ್ತಿಯಿದೆ. ಗೋವಿನ ವಿಷಯದಲ್ಲಿ ಅವರ ಶ್ರದ್ಧೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರು ಗೋಸೇವೆಯ ಸಂಕಲ್ಪ ಮಾಡಿರುವುದು ದೊಡ್ಡ ಮಟ್ಟದ ಕೆಲಸಕ್ಕೆ ಬುನಾದಿಯಾಗಿದೆ. ಅವರ ವ್ಯವಸ್ಥೆ ಸರ್ವಾನುಮತದಿಂದ ನಡೆಯುವಂಥದ್ದು. ಅವರ ಕಾರ್ಯಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ.

— ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮಚಂದ್ರಾಪುರ ಮಠ




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net