ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆ ಸಾಕಾರ I digital india

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಜಗದೀಶ್, ಮಾಲತೇಶ್ ಇದ್ದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಜಗದೀಶ್, ಮಾಲತೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುಪಿಐ ಮೂಲಕ ವಹಿವಾಟು ಏರಿಕೆ
  • ಎಲ್ಲ ವರ್ಗಗಳಿಗೂ ಒಂದೊಂದು ಯೋಜನೆ
  • ಮೆಟ್ರೋ ವ್ಯವಸ್ಥೆ 5ರಿಂದ 29 ನಗರಗಳಿಗೆ ಹೆಚ್ಚಳ
  • ಸಂಸದ ರಾಘವೇಂದ್ರ ಹೇಳಿಕೆ
ಶಿವಮೊಗ್ಗ: ಪ್ರಧಾನಿಯಾಗಿ ನರೇಂದ್ರ ಮೋದಿ (modi) 4,399 ದಿನಗಳ ಸುದೀರ್ಘ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (neharu) ಅವರ ದಾಖಲೆ ಮುರಿದಿದ್ದಾರೆ. ಅಲ್ಲದೆ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಅನೇಕ ಐತಿಹಾಸಿಕ (historical) ತೀರ್ಮಾನಗಳನ್ನು ಕೈಗೊಂಡು ಭಾರತವನ್ನು ಸದೃಢಗೊಳಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನರೇಂದ್ರ ಮೋದಿ ವಿಶ್ವ ಮಟ್ಟದ ನಾಯಕನಾಗಿ ಬೆಳೆದಿರುವುದು ಈ ದೇಶದ ಹೆಮ್ಮೆ. ಜನರ ಕಲ್ಯಾಣಕ್ಕಾಗಿ ಗರೀಬ್ ಕಲ್ಯಾಣ್ ಯೋಜನೆ, ಗ್ರಾಮೀಣ ಜನರಿಗೆ ಜಲಜೀವನ್ ಮಿಷನ್, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಸಾಮಾನ್ಯ ಜನರಿಗೆ ಜನಧನ ಯೋಜನೆ ಮೋದಿ ಅವರು ಜಾರಿಗೆ ತಂದು ಯಶಸ್ವಿಗೊಳಿಸಿದ ಯೋಜನೆಗಳಾಗಿವೆ ಎಂದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಮಹಿಳೆಯರಿಗೆ ಉಜ್ವಲ ಯೋಜನೆ, ತಂತ್ರಜ್ಞಾನಕ್ಕೆ ಪೂರಕವಾಗಿ ಡಿಜಿಟಲ್ ಇಂಡಿಯಾ, ಆರೋಗ್ಯ ಕಾಳಜಿಗಾಗಿ ಆಯುಷ್ಮಾನ್ ಆರೋಗ್ಯ ಯೋಜನೆಗಳು ಗಮನಸೆಳೆದಿವೆ ಎಂದು ಅಭಿಪ್ರಾಯಪಟ್ಟರು.
ಮೋದಿ ಪ್ರಧಾನಿಯಾಗುವ ಮುನ್ನ 2014ರಲ್ಲಿ ದೇಶದಲ್ಲಿ ಕೇವಲ ಐದು ನಗರಗಳಲ್ಲಿ ಮೆಟ್ರೋ ಜಾಲವಿತ್ತು. ಈಗದು 29 ನಗರಗಳಲ್ಲಿ 1,300 ಕಿ.ಮೀ.ಗೆ ಏರಿಕೆಯಾಗಿದೆ. ಇನ್ನೂ 900 ಕಿ.ಮೀ ಮೆಟ್ರೋ ರೈಲು ಮಾರ್ಗದ ನಿರ್ಮಾಣ ಪ್ರಗತಿಯಲ್ಲಿದೆ. ಯುಪಿಐ ಡಿಜಿಟಲ್ ಇಂಡಿಯಾ ಮೂಲಕ ಶೇ.85ರಷ್ಟು ಹಣಕಾಸಿನ ವ್ಯವಹಾರಗಳು ನಡೆಯುತ್ತಿವೆ. 2026ರ ಮಾರ್ಚ್ ವೇಳೆಗೆ ಇದು 2,264 ಸಾವಿರ ಕೋಟಿ ರೂ. ವಹಿವಾಟು ನಡೆಸಿದೆ ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಂ.ಬಿ.ಹರಿಕೃಷ್ಣ, ಎನ್.ಡಿ.ಸತೀಶ್, ಪದ್ಮಿನಿ, ಚಂದ್ರಶೇಖರ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ಕ್ಷೇತ್ರಕ್ಕೆ 22 ಸಾವಿರ ಕೋಟಿ ರೂ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 2014ರಿಂದ ಇಲ್ಲಿಯವರೆಗೆ 73 ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರದಿಂದ ಸುಮಾರು 22 ಸಾವಿರ ಕೋಟಿ ರೂ. ಅನುದಾನ ದೊರೆತಿದೆ. 990 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಮುಕ್ತಾಯವಾಗಿದೆ. ವಿಮಾನ ನಿಲ್ದಾಣ, ಸಿಗಂದೂರು ಸೇತುವೆ ನಿರ್ಮಾಣವಾಗಿದೆ. ಪ್ರಸ್ತುತ ಶಿವಮೊಗ್ಗ- ಶೃಂಗೇರಿ- ಮಂಗಳೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೇ ಕಾರ್ಯ ಆರಂಭವಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು. ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಲ್ಲಿ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಿದೆ. ಇದರಿಂದ ಉದ್ಯೋಗಸ್ಥರು, ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಶಿವಮೊಗ್ಗ ಸಮೀಪದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಿಂದ ಸುಮಾರು 30 ದೇಶಗಳಿಗೆ ವಿವಿಧ ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಹೇಳಿದರು.

ಸಿಲಿಂಡರ್ ಸಂಖ್ಯೆ ಇಳಿಕೆ ತಾತ್ಕಾಲಿಕ

ಉಜ್ವಲ ಯೋಜನೆಯಲ್ಲಿ ಬಡಕುಟುಂಬಕ್ಕೆ ವರ್ಷಕ್ಕೆ 4 ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಈಗ ಅದನ್ನು ಎರಡಕ್ಕೆ ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಉತ್ಪನ್ನಗಳ ಸಾಗಣೆಯಲ್ಲಿ ವ್ಯತ್ಯಯ ಆಗಿರುವುದೇ ಇದಕ್ಕೆ ಕಾರಣ. ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಹಿಂದಿನಂತೆಯೇ ನಾಲ್ಕು ಸಿಲಿಂಡರ್ ನೀಡಲಾಗುತ್ತದೆ ಎಂದು ರಾಘವೇಂದ್ರ ಹೇಳಿದರು. ರಾಜ್ಯ ಸರ್ಕಾರ ವಿಬಿಜಿ-ರಾಮ್ ಜಿ ಯೋಜನೆಗೆ ಸರಿಯಾಗಿ ಸ್ಪಂದಿಸದ ಕಾರಣ ಕೇಂದ್ರದ ಅನುದಾನ ಪಡೆಯುವಲ್ಲಿ ವಿಫಲವಾಗಿದೆ. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು. ಶಿವಮೊಗ್ಗ ನಿಲ್ದಾಣದಿಂದ ವಿಮಾನಯಾನ ಸಂಚಾರಕ್ಕೆ ರಾಜ್ಯ ಸರ್ಕಾರ ಸಮರ್ಪಕ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಅನೇಕ ವಿಮಾನಗಳು ಸ್ಥಗಿತಗೊಂಡಿವೆ. ಈಗ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net