ತೀರ್ಥಹಳ್ಳಿ: ಬಗರ್ಹುಕುಂ ಮಂಜೂರಾತಿ ಸಕ್ರಮದ ಕುರಿತು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ. ಇದರಿಂದ ಹತ್ತು ಸಾವಿರಕ್ಕೂ ಹೆಚ್ಚಿನ ಬಗರ್ಹುಕುಂ ಫಲಾನುಭವಿಗಳಿಗೆ ಸಮಸ್ಯೆ ಎದುರಾಗುವ ಆತಂಕವಿದೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿರುವ ಶಾಸಕರು ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದ್ವೇಷದಿಂದ ಕೇಳಿರುವ ಮಾಹಿತಿಯಿಂದಾಗಿ ಕಳೆದ ಸುಮಾರು 40 ವರ್ಷಗಳ ಹಿಂದೆ ಮಂಜೂರಾಗಿರುವ ಫಲಾನುಭವಿಗಳಿಗೂ ಸಮಸ್ಯೆ ಎದುರಾಗುವ ಆತಂಕವಿದೆ ಎಂದು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಗ್ರ ವರದಿ ನೀಡುವಂತೆ ಸರ್ಕಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ನೇಮಿಸಿದೆ. ಬಗರ್ಹುಕುಂ ಸಂತ್ರಸ್ತರ ಪರ ಎಂದು ಹೇಳುವ ಶಾಸಕರು ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಸದನದಲ್ಲಿ ಮಾಡಿರುವ ಆರೋಪ ಬಗರ್ಹುಕುಂ ಸಂತ್ರಸ್ತರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಕುರಿತು ಎಲ್ಲ ಬಗರ್ಹುಕುಂ ರೈತರಿಗೂ ಪತ್ರ ಬರೆಯುವುದಾಗಿ ತಿಳಿಸಿರುವ ಶಾಸಕರು, ಬಗರ್ಹುಕುಂ ಸಂತ್ರಸ್ತರ ಪರವಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಡೇಮನೆ ಗ್ರಾಮದ ರಸ್ತೆಗೆ ಮಂಜೂರಾಗಿದ್ದ 2.50 ಕೋಟಿ ರೂ. ಅನುದಾನವನ್ನು ಭಿಂತಳ ಗ್ರಾಮದಲ್ಲಿರುವ ಸ್ವಂತ ಜಮೀನಿಗೆ ಹೋಗುವ ರಸ್ತೆಗೆ ಬಳಸಿಕೊಂಡು ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಗೋಶಾಲೆ ಮಾಡುವ ಉದ್ದೇಶವಿದ್ದ 10 ಎಕರೆ ಈ ಭೂಮಿ ದಟ್ಟ ಅರಣ್ಯದಿಂದ ಕೂಡಿದೆ. ಅಲ್ಲಿರುವ ಮರಗಳನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ಬೈಪಾಸ್ ಹೆದ್ದಾರಿಯನ್ನು ಶಾಸಕರ ಜಮೀನಿನ ಸಮೀಪ ಹೋಗುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಶಾಸಕರು ಒತ್ತಾಯಿಸಬೇಕು. ಅವರ ದ್ವೇಷದ ರಾಜಕಾರಣ ಮತ್ತು ೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದರು.
ಮುಖಂಡರಾದ ಜಿ.ಎಸ್.ನಾರಾಯಣ ರಾವ್, ಬಾಳೇಹಳ್ಳಿ ಪ್ರಭಾಕರ್, ಗೀತಾ ರಮೇಶ್, ಆದರ್ಶ ಹುಂಚದಕಟ್ಟೆ, ವಿಲಿಯಂ ಮಾರ್ಟಿಸ್, ಅಮರನಾಥ ಶೆಟ್ಟಿ, ಶ್ರೇಯಸ್ ರಾವ್, ಶಬನಂ ಇತರರಿದ್ದರು.
ಶಾಸಕರ ಆರೋಪಕ್ಕೆ ಸ್ಪಷ್ಟನೆ
ಶಾಸಕ ಜ್ಞಾನೇಂದ್ರ ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ಹೈಮಾಸ್ಟ್ ದೀಪದ ಅಳವಡಿಕೆ ಬಗ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಸದಸ್ಯ ಸುನಿಲ್ ಶಿರನೆಲ್ಲಿ ಸ್ಪಷ್ಟನೆ ನೀಡಿದರು. ಧಾರ್ಮಿಕ ಕೇಂದ್ರದಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂನೆಯಾಗಿಲ್ಲ. ಎಲ್ಲವೂ ನಿಯಮ ಬದ್ಧವಾಗಿಯೇ ನಡೆದಿದೆ. ಶಾಸಕರ ಆರೋಪ ರಾಜಕೀಯ ಪ್ರೇರಿತ. ನಮ್ಮ ಅಧಿಕಾರದ ಅವಧಿಯಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದರು.