ಜಪಾನ್‌ನ 91 ವರ್ಷದ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾ ವಾಕಿ, ಅರಣ್ಯ ಬೆಳೆಸಲು ಕಂಡುಹಿಡಿದ ವಿಶಿಷ್ಟ ಪದ್ಧತಿ ಈಗ ಅವರದೇ ಹೆಸರಿನಲ್ಲಿ ಪ್ರಚಲಿತಕ್ಕೆ ಬಂದಿದೆ. ಜಪಾನ್‌ನಲ್ಲಿ ನೈಸರ್ಗಿಕ ಅರಣ್ಯಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ ಬದಲಾದ ಸನ್ನಿವೇಶ, ಜಾಗತಿಕ ತಾಪಮಾನದ ಏರಿಕೆ ಹಿನ್ನೆಲೆಯಲ್ಲಿ ತುರ್ತಾಗಿ ಅರಣ್ಯ ವಿಸ್ತಾರ ಮಾಡಬೇಕು ಎಮದು ನಿರ್ಧರಿಸಿದ್ದ ಯೊಕೋಹಾಮ ವಿವಿಯ ಸಂಶೋಧಕ ಅಕಿರಾ ಮಿಯಾವಾಕಿ ಹೊಸ ಪದ್ಧತಿ ಪರಿಚಯಿಸಿದರು. ಗಿಡಗಳ ನಡುವೆ ಇಷ್ಟೇ ಅಂತರವಿರಬೇಕು ಎಂಬ ಹಳೆಯ ಪದ್ಧತಿ ಬದಲಿಗೆ ಒಂದರಿಂದ ಎರಡು ಅಡಿಗೆ ಒಂದು ಗಿಡ ನೆಡುವುದು, ಅದಕ್ಕೂ ಮುನ್ನ ಗಿಡಗಳಿಗೆ ಅಗತ್ಯವಿರುವ ಪೋಷಕಾಂಶವನ್ನು ಮಣ್ಣಿಗೆ ಸೇರಿಸುವುದು, ಅಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವ ಗಿಡಗಳನ್ನೇ ನೆಡುವುದು ಮಿಯಾವಾಕಿ ಪದ್ಧತಿ.