ತೀರ್ಥಹಳ್ಳಿ: ಮುಜರಾಯಿ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ತಾಲೂಕಿನ ಮುಜರಾಯಿ ದೇವಸ್ಥಾನಗಳ ಹುಂಡಿ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಬರೆದಿದ್ದೇನೆ. ಸಮಗ್ರ ತನಿಖೆ ಆಗದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ವ್ಯವಸ್ಥಿತವಾದ ದೀಪ ಇದ್ದರೂ ಹಣ ಹೊಡೆಯುವ ಉದ್ದೇಶದಿಂದ ತಾಲೂಕಿನ ಹಣಗೆರೆಕಟ್ಟೆ, ಮೃಗವಧೆ ಹಾಗೂ ಪಟ್ಟಣದ ರಾಮೇಶ್ವರ ದೇವಸ್ಥಾನಗಳಿಗೆ ದುಪ್ಪಟ್ಟು ಬಿಲ್ ಪಾವತಿಸಿ 17 ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಹಣ ಹೊಡೆಯುವ ದೃಷ್ಟಿಯಿಂದ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ದೇವಸ್ಥಾನಗಳ ಧರ್ಮದರ್ಶಿ ಮಂಡಳಿಗಳ ಗಮನಕ್ಕೂ ವಿಚಾರವನ್ನು ತಂದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರತಿ ದೀಪಕ್ಕೆ 4.50 ಲಕ್ಷ ರೂ.ನಂತೆ ಖರೀದಿಸಿರುವ ದೀಪಗಳಿಗಿಂತ ಉತ್ತಮವಾಗಿರುವ ಹೈಮಾಸ್ಟ್‌ಗೆ ಮಾರುಕಟ್ಟೆ ಬೆಲೆ 1.75 ಲಕ್ಷ ರೂ ಇದೆ. ಹಣ ಹೊಡೆಯುವ ಸಲುವಾಗಿ ಅಧಿಕ ಬಿಲ್ ಮಾಡಲಾಗಿದೆ. ಮೃಗವಧೆ ದೇವಸ್ಥಾನಕ್ಕೆ ಅಳವಡಿಸಿದ ಬಿಲ್ ಪಾವತಿ ತಡೆಹಿಡಿದ ಬಗ್ಗೆ ಜಯಕರ ಶೆಟ್ಟಿ ಎಂಬುವರು ತಾಲೂಕು ಕಚೇರಿ ಎದುರು ಧರಣಿ ಮಾಡಿದ್ದರು. ಕಟ್ಟೆಹಕ್ಕಲು ಗ್ರಾಪಂ ಮಾಜಿ ಸದಸ್ಯ, ಕಾಂಗ್ರೆಸ್‌ನ ಇನ್ನೋರ್ವ ಮುಖಂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮಾತನಾಡುವ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಇದು ಒಂದು ತಾಲೂಕಿನ ಪ್ರಶ್ನೆಯಾಗಿ ಉಳಿದಿಲ್ಲ. ರಾಜ್ಯದ ಇತರೆ ಕಡೆಗಳಲ್ಲೂ ನಡೆದಿರಬಹುದಾದ ಹುಂಡಿ ಚೋರಿ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದರು.
ಮುಜರಾಯಿ ಇಲಾಖೆ ಅಧಿಕಾರಿಗಳು ಜಾತ್ರೆಯ ವ್ಯವಸ್ಥೆ ಮತ್ತು ಹಬ್ಬದಾಚರಣೆ ನೆಪದಲ್ಲಿ ಮೂರೂ ದೇವಸ್ಥಾನಗಳ ಹುಂಡಿ ಹಣದಿಂದ ತಲಾ ಒಂದು ತಿಂಗಳ ವೇತನವನ್ನೇ ಡ್ರಾ ಮಾಡಿಕೊಂಡಿದ್ದಾರೆ. ಇದರಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ, ತೀರ್ಥಹಳ್ಳಿ ತಹಸೀಲ್ದಾರ್ ಮತ್ತು ಕೇಸ್ ವರ್ಕರ್ ಶಾಮೀಲಾಗಿದ್ದಾರೆ. ಈವರೆಗಿನ ಯಾವ ಅಧಿಕಾರಿಗಳೂ ಹುಂಡಿ ಹಣವನ್ನು ವೇತನ ರೂಪದಲ್ಲಿ ಪಡೆದುಕೊಂಡಿಲ್ಲ ಎಂದು ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.